ನವದೆಹಲಿ: ಜಾವೆಲಿನ್ ಥ್ರೋ ತಾರೆ ಹಾಗೂ ಒಲಿಪಿಂಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಆಗಿ ಸೇರ್ಪಡೆಯಾಗಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ದೆಹಲಿಯ ತಮ್ಮ ಕಚೇರಿಯಲ್ಲಿ ನೀರಜ್ ಚೋಪ್ರಾರಿಗೆ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಲಾಂಛನ ತೊಡಿಸಿ, ಅಭಿನಂದಿಸಿದರು. ಭಾರತೀಯ ಸೇನೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹಾಜರಿದ್ದರು.
2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದರು. ಅವರು ಪರಮ ವಿಶಿಷ್ಟ ಸೇವಾ ಪದಕ, ಪದ್ಮಶ್ರೀ ಹಾಗೂ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ ಭಾರತದ ಅತ್ಯುತ್ತಮ ಕ್ರೀಡಾಪಟುವಾಗಿದ್ದು, ಅವರ ನಿರಂತರ ಪರಿಶ್ರಮ, ದೇಶಭಕ್ತಿಯು ಭಾರತೀಯ ಮನೋಭಾವದ ಸಂಕೇತ. ಭವಿಷ್ಯದಲ್ಲಿ ಅವರ ಎಲ್ಲ ಪ್ರಯತ್ನಗಳಿಗೂ ಯಶಸ್ಸು ಲಭಿಸಲಿ ಎಂದು ರಾಜನಾಥ್ ಸಿಂಗ್ ಶುಭ ಹಾರೈಸಿದ್ದಾರೆ.
ಕ್ರಿಕೆಟಿಗ ಎಂ.ಎಸ್.ಧೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಸೇರಿದಂತೆ ಹಲವು ಖ್ಯಾತನಾಮರು ಟೆರಿಟೋರಿಯಲ್ ಆರ್ಮಿಯ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ.