ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ 21 ವರ್ಷದ ಅಮನ್ ಸೆಹ್ರಾವತ್ ಅವರಿಗೆ ರೈಲ್ವೆ ಇಲಾಖೆ ಭರ್ಜರಿ ಬಹುಮಾನ ನೀಡಿದೆ.
ಭಾರತದ ಕುಸ್ತಿಪಟು ಈಗ ರೈಲ್ವೆ ಇಲಾಖೆಯ ವಿಶೇಷ ಕರ್ತವ್ಯದ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಒಲಿಂಪಿಕ್ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಅಮನ್ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಭಾರತಕ್ಕೆ ಆರನೇ ಪದಕ ತಂದುಕೊಟ್ಟಿದ್ದರು.
ಉತ್ತರ ರೈಲ್ವೆ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಜನರಲ್ ಮ್ಯಾನೇಜರ್ ಶೋಭನ್ ಚೌಧರಿ ಅವರು ಸೆಹ್ರಾವತ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ, ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ ಸುಜಿತ್ ಕುಮಾರ್ ಮಿಶ್ರಾ ಅವರು ಸೆಹ್ರಾವತ್ ಅವರಿಗೆ ಬಡ್ತಿ ನೀಡಿರುವುದಾಗಿ ಘೋಷಿಸಿದರು.
ಒಲಿಂಪಿಕ್ ಕಂಚಿನ ಪದಕ ಗೆದ್ದ ಮತ್ತೊಬ್ಬ ಭಾರತೀಯ ಅಥ್ಲೀಟ್ ಸ್ವಪ್ನಿಲ್ ಕುಸಲೆ ಅವರು ಭಾರತೀಯ ರೈಲ್ವೆಯ ಪ್ರಯಾಣ ಟಿಕೆಟ್ ಕಲೆಕ್ಟರ್ (ಟಿಟಿಇ) ಹುದ್ದೆಯಿಂದ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್ಡಿ ) ಆಗಿ ಡಬಲ್ ಬಡ್ತಿ ಪಡೆದಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸಾಲೆ 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಐತಿಹಾಸಿಕ ಪದಕ ಗೆದ್ದಿದ್ದಾರೆ.