ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಗೆದ್ದ ಭಾರತದ ಸ್ವಪ್ನಿಲ್ ಕುಶಾಲೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಅಸಾಧಾರಣ ಪ್ರದರ್ಶನ ನೀಡಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಸ್ವಪ್ನಿಲ್ ಕುಸಾಲೆ ಅವರಿಗೆ ಅಭಿನಂದನೆಗಳು.
ಅವರ ಕಾರ್ಯಕ್ಷಮತೆ ವಿಶೇಷವಾಗಿದೆ. ಅವರು ಉತ್ತಮ ಸ್ಥಿತಿಸ್ಥಾಪಕತ್ವ ಮತ್ತು ಕೌಶಲ್ಯಗಳನ್ನು ತೋರಿಸಿದ್ದಾರೆ. ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಕೂಡ ಅವರಾಗಿದ್ದಾರೆ. ಇದನ್ನು ಪ್ರತಿಯೊಬ್ಬ ಭಾರತೀಯ ಸಂಭ್ರಮಿಸುತ್ತಾನೆ ಎಂದು ಮೋದಿ ಅವರ ಎಕ್ಸ್ ಪೋಸ್ಟ್ ಮಾಡಲಾಗಿದೆ.
ಸ್ವಪ್ನಿಲ್ ಕುಶಾಲೆ ಮಂಡಿಯೂರಿ ಶೂಟ್ ಮಾಡುವ ವಿಭಾಗದಲ್ಲಿ ಆರನೇ ಸ್ಥಾನದಲ್ಲಿದ್ದರು. ಇದಾದ ಬಳಿಕ ಪ್ರೋನ್ ಅಂದರೆ ನೆಲದ ಮೇಲೆ ಮಲಗಿ ಶೂಟ್ ಮಾಡುವ ವಿಭಾಗದಲ್ಲಿ 5ನೇ ಸ್ಥಾನಕ್ಕೆ ಜಿಗಿದರು. ಇದಾದ ಬಳಿಕ ನಿಂತುಕೊಂಡು ಶೂಟ್ ಮಾಡುವ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ವಪ್ನಿಲ್ ಕುಶಾಲೆ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಇದುವರೆಗೂ ಯಾವೊಬ್ಬ ಭಾರತೀಯ ಶೂಟರ್ ಫೈನಲ್ ಪ್ರವೇಶಿಸಿರಲಿಲ್ಲ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ 7ನೇ ಸ್ಥಾನ ಪಡೆದಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದೀಗ ಮೂರನೇ ಕಂಚಿನ ಪದಕ ಒಲಿದಿದೆ. ಈ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು.