ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಈ ಸ್ಪರ್ಧಿಗಳಿಂದ ಪದಕದ ನಿರೀಕ್ಷೆ: ಇಲ್ಲಿದೆ ಇಂದಿನ ಈವೆಂಟ್ ಲಿಸ್ಟ್

Krishnaveni K

ಗುರುವಾರ, 1 ಆಗಸ್ಟ್ 2024 (10:14 IST)
Photo Credit: Facebook
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ನಿನ್ನೆ ಭಾರತಕ್ಕೆ ಶುಭ ದಿನವಾಗಿತ್ತು. ಹೆಚ್ಚಿನ ಸ್ಪರ್ಧೆಗಳಲ್ಲಿ ಭಾರತೀಯ ತಾರೆಯರು ಗೆದ್ದು ಮುಂದಿನ ಹಂತಕ್ಕೇರುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಇಂದಿನ ಈವೆಂಟ್ ಗಳ ಲಿಸ್ಟ್ ಇಲ್ಲಿದೆ.

ನಿನ್ನೆ ಪಿವಿ ಸಿಂಧು ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರೌಂಡ್ 16 ಕ್ಕೆ ಅರ್ಹತೆ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್,  ಎಚ್ ಎಸ್ ಪ್ರಣಯ್ ಇಬ್ಬರೂ ತಮ್ಮ ತಮ್ಮ ಪಂದ್ಯ ಗೆದ್ದು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. 75 ಕೆಜಿ ವಿಭಾಗ ಬಾಕ್ಸಿಂಗ್ ನಲ್ಲಿ ಲವ್ಲಿವಾ ಬರ್ಗೊಹೈನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನೊಬ್ಬ ಬಾಕ್ಸರ್ ನಿಖತ್ ಝರೀನಾ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ. ಭಾರತದ ಹಿರಿಯ ಆರ್ಚರಿ ಪಟು ದೀಪಿಕಾ ಕುಮಾರಿ ಪ್ರಿ ಕ್ವಾರ್ಟರ್ ಫೈನಲ್ ಗೇರಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ. 50 ಮೀ. ರೈಫಲ್ಸ್ ವಿಭಾಗದಲ್ಲಿ ಸ್ವಪ್ನಿಲ್ ಕುಸಾಲೆ ಫೈನಲ್ ಸುತ್ತಿಗೆ ಪ್ರವೇಶಿಸಿ ಶೂಟಿಂಗ್ ನಲ್ಲಿ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.

ಇಂದೂ ಭಾರತದ ಖ್ಯಾತ ತಾರೆಯರು ಕಣದಲ್ಲಿದ್ದಾರೆ. ಪುರುಷರ 20 ಕಿ.ಮೀ. ರೇಸ್ ವಾಕ್ ವಿಭಾಗದಲ್ಲಿ ಅಕ್ಷದೀಪ್ ಸಿಂಗ್, ವಿಕಾಸ್ ಸಿಂಗ್, ಪರಮಜೀತ್ ಬಿಷ್ಟ್, ವನಿತೆಯರ ವಿಭಾಗದಲ್ಲಿ ಪ್ರಿಯಾಂಕ ಗೋಸ್ವಾಮಿ ಸ್ಪರ್ಧೆಯಲ್ಲಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಪುರುಷರ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಲಕ್ಷ್ಯ ಸೇನ್ ಕಣದಲ್ಲಿದ್ದಾರೆ. ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಸ್ಪರ್ಧಿಸಲಿದ್ದಾರೆ.

ಗಾಲ್ಫ್ ನಲ್ಲಿ ಗಗನಜಿತ್ ಭುಲ್ಲಾರ್, ಶುಭಂಕರ್ ಶರ್ಮ ಕಣದಲ್ಲಿದ್ದಾರೆ. ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. ಭಾರತ ಮತ್ತು ಬೆಲ್ಜಿಯಂ ನಡುವೆ ಇಂದು ಹಾಕಿ ಪಂದ್ಯ ನಡೆಯಲಿದೆ. ಬಾಕ್ಸಿಂಗ್ ನಲ್ಲಿ ನಿಖತ್ ಜರೀನ್, ಆರ್ಚರಿಯಲ್ಲಿ ಪ್ರವೀಣ್ ಜಾಧವ್ ಎಲಿಮಿನೇಷನ್ ಸುತ್ತಿನಲ್ಲಿ ಸೆಣಸಲಿದ್ದಾರೆ. ಶೂಟಿಂಗ್ ನಲ್ಲಿ ಸಿಫ್ತ್ ಕೌರ್ ಶರ್ಮ, ಅಂಜುಮ್ ಮೌದ್ಗಿಲ್, ಸೈಲಿಂಗ್ ನಲ್ಲಿ ನೇತ್ರಾ ಕುಮಾನನ್ ಕಣದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ