ಭಾರತಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ತಲುಪಲು ಅವಕಾಶ ನೀಡುವ ಮೂಲಕ ಗುರುವಾರ ರಾತ್ರಿ ಗ್ರೇಟ್ ಬ್ರಿಟನ್ ಭಾರತಕ್ಕೆ ಭಾರೀ ಅನುಕೂಲ ಮಾಡಿಕೊಟ್ಟಿದೆ. ಲಂಡನ್‌ನಲ್ಲಿ ನಡೆದ ಲೀಗ್ ಕೊನೆಯ ಪಂದ್ಯದಲ್ಲಿ 1-3ರಿಂದ ಹಿಂದಿದ್ದ ಬ್ರಿಟನ್ ಬೆಲ್ಜಿಯಂ ತಂಡದ ಜತೆ 3-3ರಿಂದ ಡ್ರಾಮಾಡಿಕೊಂಡಿದೆ. ಇದರಿಂದ ತವರು ತಂಡ ಬ್ರಿಟನ್ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆಯಲು ಭಾರತಕ್ಕೆ ಅವಕಾಶ ಕಲ್ಪಿಸುವ ಮೂಲಕ 6 ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಭಾರತ ಹೋರಾಡಲಿದೆ.
ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-4ರಿಂದ ಸೋಲನುಭವಿಸಿದರೂ, ಭಾರತದ ತಂಡ ಏಳು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಕೊನೆಗೊಂಡಿದೆ. ಎರಡು ಜಯ, ಎರಡು ಸೋಲು ಮತ್ತು ಒಂದು ಡ್ರಾನಿಂದ ಭಾರತ ಏಳು ಪಾಯಿಂಟ್ ಸಂಗ್ರಹಿಸಿದ್ದು, ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಇನ್ನೊಂದು ಅವಕಾಶ ಸಿಕ್ಕಿದೆ.