ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಫೈನಲ್​ನಲ್ಲಿ ಮುಗ್ಗರಿಸಿದ ಭಾರತದ ಸಿಂಧು

Sampriya

ಭಾನುವಾರ, 26 ಮೇ 2024 (14:47 IST)
photo Courtesy X
ಕೌಲಾಲಂಪುರ: ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಮುಗ್ಗರಿಸಿದರು. ಕಳೆದೆರಡು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ಭಾರತದ ಆಟಗಾರ್ತಿಗೆ ಮತ್ತೆ ನಿರಾಸೆಯಾಗಿದೆ.

ಭಾನುವಾರ ಇಲ್ಲಿ ನಡೆದ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಚೀನಾದ ವಾಂಗ್‌ ಝಿ ಯಿ ವಿರುದ್ಧ ಸಿಂಧು ಸೋಲು ಕಂಡಿದ್ದಾರೆ. ಮೂರು ಗೇಮ್​ಗಳ ಮ್ಯಾರಥಾನ್‌ ಫೈನಲ್‌ ಸೆಣಸಾಟದಲ್ಲಿ 15ನೇ ರ್‍ಯಾಂಕ್‌ನ ಸಿಂಧು 21-16, 5-21, 21-16 ಗೇಮ್​ಗಳ ಅಂತರದಿಂದ 7ನೇ ರ್‍ಯಾಂಕ್‌ನ ವಾಂಗ್‌ ಝಿ ಯಿ ವಿರುದ್ಧ ಸೋಲು ಕಂಡರು. ಇದು ವಾಂಗ್‌ ಝಿ ಯಿ ವಿರುದ್ಧ ಸಿಂಧುಗೆ ಎದುರಾದ 2ನೇ ಸೋಲಾಗಿದೆ.

ಶನಿವಾರ ರಾತ್ರಿ ನಡೆದಿದ್ದ ಮಹಿಳಾ ಸಿಂಗಲ್ಸ್​ ವಿಭಾಗದ ತೀವ್ರ ಪೈಪೋಟಿಯ ಸೆಮಿಫೈನಲ್‌ ಸೆಣಸಾಟದಲ್ಲಿ 5ನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್‌ನ‌ 20ನೇ ಶ್ರೇಯಾಂಕದ ಆಟಗಾರ್ತಿ ಬುಸಾನನ್‌ ವಿರುದ್ಧ 13-21, 21-16, 21-12 ಅಂತರದಿಂದ ಗೆಲುವು ಸಾಧಿಸಿದ್ದರು.  

ಫೈನಲ್‌ನ ಮೊದಲ ಗೇಮ್​ನಲ್ಲಿ ಅತ್ಯಂತ ಜೋಶ್​ನಿಂದ ಆಡಿದ ಸಿಂಧು 21-16 ಗೇಮ್​ಗಳ ಅಂತರದಿಂದ ಗೆದ್ದು ಮುನ್ನಡೆ ಸಾಧಿಸಿದರು. ಆದರೆ, ದ್ವಿತೀಯ ಗೇಮ್​ನಲ್ಲಿ ತಿರುಗಿ ಬಿದ್ದ ವಾಂಗ್‌ ಝಿ ತಮ್ಮ ಬಲಿಷ್ಠ ಹೊಡೆತಗಳ ಮೂಲಕ 21-5 ಅಂತರದ ಗೆಲುವು ಸಾಧಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಿತು. ಆರಂಭದಲ್ಲಿ ಭಾರೀ ಹಿನ್ನಡೆಯಲ್ಲಿದ್ದ ವಾಂಗ್‌ ಝಿ ಆ ಬಳಿಕ ಸತತವಾಗಿ ಅಂಕಗಳಿಸಿ 14-13 ಮುನ್ನಡೆ ಕಾಯ್ದುಕೊಂಡರು. ಆನಂತರವೂ ಸತತ ಅಂಕಗಳಿಂದ ಪಂದ್ಯವನ್ನು ಗೆದ್ದು ಬೀಗಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ