ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ತೆರೆ: ಪದಕ ಗಳಿಕೆಯಲ್ಲಿ ಭಾರತ ಹೊಸ ದಾಖಲೆ

sampriya

ಶನಿವಾರ, 25 ಮೇ 2024 (19:54 IST)
Photo By X
ಕೊಬೆ: ಶನಿವಾರ ತೆರೆಕಂಡ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ 17 ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು.

ಭಾರತವು ಕೂಟದಲ್ಲಿ 6 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದುಕೊಂಡು ಹೊಸ ದಾಖಲೆ ನಿರ್ಮಿಸಿತು. ಪ್ಯಾರಿಸ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತವು ಒಟ್ಟು 10 ಪದಕಗಳನ್ನು ಗೆದ್ದಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಪದಕ ಪಟ್ಟಿಯಲ್ಲಿ ಚೀನಾ 87 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು. ಬ್ರೆಜಿಲ್‌ 42, ಉಜ್ಬೇಕಿಸ್ತಾನ 13, ಬ್ರಿಟನ್‌ 12 ಮತ್ತು ಅಮೆರಿಕ 24 ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಕೂಟದ ಕೊನೆಯ ದಿನ ದೆಹಲಿಯ ಓಟಗಾರ್ತಿ ಸಿಮ್ರಾನ್ ಶರ್ಮಾ ಸ್ವರ್ಣ ಗೆದ್ದರು. ಮಹಿಳೆಯರ 200 ಮೀಟರ್ (ಟಿ12) ಸ್ಪರ್ಧೆಯಲ್ಲಿ ಸಿಮ್ರಾನ್ 24.95 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರು. ಮಹಿಳೆಯರ 100 ಮೀಟರ್‌ (ಟಿ35) ವಿಭಾಗದಲ್ಲಿ ಭಾರತದ ಪ್ರೀತಿ ಪಾಲ್‌ ಕಂಚಿನ ಪದಕ ಗೆದ್ದರು.

ಪುರುಷರ ಜಾವೆಲಿನ್ ಥ್ರೋ (ಎಫ್‌46) ಸ್ಪರ್ಧೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಶ್ರೀಲಂಕಾದ ದಿನೇಶ್ ಪ್ರಿಯಾಂತಾ ಹೆರಾತ್ ವಿರುದ್ಧ ಪ್ರತಿಭಟನೆ ದಾಖಲಿಸಿದ ನಂತರ ಭಾರತಕ್ಕೆ ಬೆಳ್ಳಿ ಮತ್ತು ಕಂಚು ದಕ್ಕಿತು.

ಫೈನಲ್‌ನಲ್ಲಿ ಭಾರತದ ರಿಂಕು ಹೂಡಾ (62.77 ಮೀಟರ್‌) ಮತ್ತು ಅಜಿತ್ ಸಿಂಗ್ (62.11 ಮೀ) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದರು. ಆದರೆ ಹೆರಾತ್ ಈ ವಿಭಾಗದಲ್ಲಿ (ಎಫ್‌46) ಸ್ಪರ್ಧಿಸಲು ಅನರ್ಹರು ಎಂದು ಪ್ರತಿಭಟನೆಯನ್ನು ಭಾರತ ದಾಖಲಿಸಿದ ಬಳಿಕ ಅವರ ಫಲಿತಾಂಶವನ್ನು ತಡೆಹಿಡಿದು, ಅನರ್ಹಗೊಳಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ