ಭುವನೇಶ್ವರ: ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಮೂರು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಕಣಕ್ಕೆ ಇಳಿದಿದ್ದಾರೆ. ಒಡಿಶಾದ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಫೆಡರೇಷನ್ ಕಪ್ ಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಣಕ್ಕೆ ಇಳಿದು ಬಂಗಾರಕ್ಕೆ ಮುತ್ತಿಕ್ಕಿದ್ದಾರೆ.
ಈ ಸ್ಪರ್ಧೆಯಲ್ಲಿ ಕನ್ನಡಿಗ ಡಿ.ಪಿ. ಮನು ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ತಪ್ಪಿಸಿಕೊಂಡರು. ಅವರು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ. ಚೋಪ್ರಾಗೆ ಮನು ತೀವ್ರ ಪೈಪೋಟಿ ನೀಡಿದರು. ಅಂತಿಮ ಹಂತದವರೆಗೂ ಅಗ್ರಸ್ಥಾನದಲ್ಲಿದ್ದ ಮನು, ಅಂತಿಮ ಸುತ್ತಿನಲ್ಲಿ ತಡವರಿಸಿ ದ್ವಿತೀಯ ಸ್ಥಾನಕ್ಕೆ ಕುಸಿದರು.
ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 82.27 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಾನೇ ನಂಬರ್ ವನ್ ಎಂಬುದನ್ನು ಸಾಬೀತುಪಡಿಸಿದರು. ಮೂರನೇ ಸುತ್ತಿನವರೆಗೂ 82.06 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದ ಮನು ಅವರನ್ನು ಅಂತಿಮ ಸುತ್ತಿನಲ್ಲಿ ನೀರಜ್ ಹಿಂದಿಕ್ಕಿದರು.
ತವರಿನಲ್ಲಿ ಕೊನೆಯ ಬಾರಿಗೆ 2021ರಲ್ಲಿ ಫೆಡರೇಶನ್ ಕಪ್‌ನಲ್ಲಿ ಆಡಿದ್ದ ನೀರಜ್ 87.80 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದರು. ನೀರಜ್ ಚೋಪ್ರಾ 2021ರ ಮಾರ್ಚ್ 17ರಲ್ಲಿ ಇದೇ ಕೂಟದಲ್ಲಿ ಭಾಗವಹಿಸಿದ ನಂತರ ದೇಶದ ಯಾವುದೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ಚಿನ್ನ (2021), ಡೈಮಂಡ್ ಲೀಗ್ ಚಾಂಪಿಯನ್ (2022), ವಿಶ್ವ ಚಾಂಪಿಯನ್ (2023) ಆಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದರು.