ಬ್ಯಾಂಕಾಕ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಭಾನುವಾರ ನಡೆದ ಥಾಯ್ಲೆಂಡ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಭಾರತದ ಆಟಗಾರರಾದ ಸಾತ್ವಿಕ್ - ಚಿರಾಗ್ ಜೋಡಿಯು 21-15, 21-15ರಿಂದ ಚೀನಾದ ಚೆನ್ ಬೋ ಯಾಂಗ್ ಮತ್ತು ಚೀನಾ ತೈಪೆಯ ಲಿಯು ಯಿ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ.
ಸಾತ್ವಿಕ್- ಚಿರಾಗ್ ಜೋಡಿಯು ಶನಿವಾರ ಸೆಮಿಫೈನಲ್‌ನಲ್ಲಿ 21-11, 21-12ರಿಂದ ಚೀನಾ ತೈಪೆಯ ಲು ಮಿಂಗ್-ಚೆ ಮತ್ತು ಟ್ಯಾಂಗ್ ಕೈ-ವೀ (ಚೀನಾ ತೈಪೆ) ಜೋಡಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಸಾತ್ವಿಕ್- ಚಿರಾಗ್ ಜೋಡಿಯು ಕಳೆದ ವರ್ಷದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಜುಲೈ- ಆಗಸ್ಟ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.
ಮಹಿಳಾ ಡಬಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿತು. ಭಾರತದ ಆಟಗಾರ್ತಿಯರು 12-21, 20-22ರಿಂದ ಅಗ್ರ ಶ್ರೇಯಾಂಕದ ಜೊಂಗ್ಕೋಲ್ಫಾನ್ ಕಿತರಕುಲ್ ಮತ್ತು ರವಿಂದಾ ಪ್ರಜೋಂಗ್ಜೈ (ಥಾಯ್ಲೆಂಡ್) ಜೋಡಿಗೆ ಮಣಿದರು.