ಟೆನಿಸ್ ತಾರೆ ಮಾರಿಯಾ ಶರಪೋವಾ ಉದ್ದೀಪನ ಮದ್ದು ಸೇವನೆ ಹಗರಣದಲ್ಲಿ ಸಿಲುಕಿ ಎರಡು ವರ್ಷ ಅಮಾನತಿನ ಶಿಕ್ಷೆಗೆ ಒಳಗಾದ ಬಳಿಕ ಭಾರತದ ಗಡಿಯೊಳಕ್ಕೂ ಅದರ ಪರಿಣಾಮ ತಟ್ಟಿದೆ. ಆಸ್ಟ್ರೇಲಿಯಾ ಓಪನ್‌ನಲ್ಲಿ ನಿಷೇಧಿತ ವಸ್ತು ಮೆಲ್ಡೋನಿಯಂ ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಶರಪೋವಾ ಈ ಅಮಾನತಿನ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ಈಗ ಗೋವಾ ಶಾಲೆಗಳ ಇಂಗ್ಲೀಷ್ ಪಠ್ಯಪುಸ್ತಕಗಳಲ್ಲಿ ಶರಪೋವಾ ಅಧ್ಯಾಯಕ್ಕೆ ಕೊಕ್ ನೀಡಲಾಗುತ್ತದೆ.
ಆದರೆ ಅವರ ಪ್ರದರ್ಶನ ವೃದ್ಧಿಸುವ ಔಷಧಿಗಳ ಸೇವನೆಗೆ ಗೋವಾದ ವಿವಿಧ ಶಿಕ್ಷಣ ತಜ್ಞರು ಮತ್ತು ಸಂಘಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಕ್ರೀಡಾ ಸೆಲೆಬ್ರಿಟಿಯ ಇಂಗ್ಲೀಷ್ ಅಧ್ಯಾಯವನ್ನು ತೆಗೆಯಬೇಕೆಂದು ಶಿಕ್ಷಣ ತಜ್ಞರು ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರು ಗೋವಾ ಪ್ರೌಢಶಾಲಾ ಮಂಡಳಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಶರಪೋವಾ ಅಧ್ಯಾಯವನ್ನು ತೆಗೆದುಹಾಕುವುದಾಗಿ ಮಂಡಳಿ ಭರವಸೆ ನೀಡಿ ಸುತ್ತೋಲೆ ಹೊರಡಿಸಿದೆ.