ಅಮೆರಿಕಾದಲ್ಲಿ ನಾಳೆಯಿಂದ ವಿಶ್ವಕಪ್‌ ಟೂರ್ನಿ: ವಿರಾಟ್‌ ಕೊಹ್ಲಿ ಮೆಚ್ಚುಗೆ ಮಾತು

sampriya

ಶನಿವಾರ, 1 ಜೂನ್ 2024 (18:03 IST)
Photo By X
ನ್ಯೂಯಾರ್ಕ್‌: ಜೂನ್‌ 2ರಿಂದ ಅಮೆರಕಾ ಮತ್ತು ವೆಸ್ಟ್‌ ಇಂಡೀಸ್‌ನ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಭಾರತ ತಂಡವು ವಾರದ ಹಿಂದೆ ಅಮೆರಿಕಾಗೆ ತೆರಳಿದ್ದು, ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ತಡವಾಗಿ ತಂಡವನ್ನು ಸೇರಿಕೊಂಡಿದ್ದಾರೆ.

ಅಮೆರಿಕದಲ್ಲಿ ಕ್ರಿಕೆಟ್‌ ಟೂರ್ನಿ ನಡೆಯುವ ಕುರಿತು ವಿರಾಟ್‌ ಕೊಹ್ಲಿ ಮೆಚ್ಚುಗೆ ಮಾತನ್ನು ಆಡಿದ್ದು, ಮುಂಬೈಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ವಿರಾಟ್ ಕೊಹ್ಲಿ ಅವರ ವಿಡಿಯೊವನ್ನು ಹಂಚಿಕೊಂಡಿದೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಮೆರಿಕದಲ್ಲಿ ನಾವು ಕ್ರಿಕೆಟ್ ಆಡಲಿದ್ದೇವೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಅದು ಈಗ ನಿಜವಾಗಿದೆ ಎಂದು ಭಾರತದ ರನ್‌ ಮಿಷಿನ್‌ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಬೆಳೆಯುತ್ತಿರುವ ಕ್ರೀಡೆ ಜಗತ್ತಿನಲ್ಲಿ ಬೀರುತ್ತಿರುವ ಪ್ರಭಾವಕ್ಕೆ ಈ ಕ್ರಿಕೆಟ್‌ ಟೂರ್ನಿ ಸಾಕ್ಷಿಯಾಗಿದೆ. ಬದಲಾವಣೆಯನ್ನು ಸ್ವೀಕರಿಸಲು ಅಮೆರಿಕ ಎಂದೂ ಸಿದ್ಧವಾಗಿದೆ. ವಿಶ್ವಕಪ್ ಆಯೋಜನೆಯ ಮೂಲಕ ಕ್ರಿಕೆಟ್ ಮತ್ತಷ್ಟು ಜನಪ್ರಿಯಗೊಳ್ಳಲು ನೆರವಾಗಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅತಿ ಹೆಚ್ಚು ರನ್ ಗಳಿಸುವ ಮೂಲಕ 'ಆರೆಂಜ್' ಕ್ಯಾಪ್‌ ಗಳಿಸಿರುವ ವಿರಾಟ್ ಕೊಹ್ಲಿ, ವಿಶ್ವಕಪ್‌ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತವು ಅಭಿಯಾನ ಆರಂಭಿಸಲಿದೆ. ಇಂದು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ