ತಿರುಪತಿ ಲಡ್ಡು ಇನ್ನು ಶುಚಿ-ರುಚಿ

WD
ವಿಶ್ವವಿಖ್ಯಾತ ತಿರುಪತಿಯ ಲಡ್ಡು ಇನ್ನಷ್ಟು ಶುಚಿ-ರುಚಿಯಾಗಿ ಲಭ್ಯವಿದೆ. ಪಾಕಶಾಲೆಯಿಂದ ಲಡ್ಡುಗಳನ್ನು ಮಾನವ ಸ್ಪರ್ಶವಿಲ್ಲದೆಯೇ ನೇರವಾಗಿ ಪ್ರಸಾದ ವಿತರಣಾ ಕೌಂಟರಿಗೆ ರವಾನಿಸುವ ವಿಶೇಷ ಯಂತ್ರವೊಂದನ್ನು ಅಲ್ಲಿ ಅಳವಡಿಸಲಾಗಿದೆ.

ದೇವಸ್ಥಾನಕ್ಕೆ ಆಗಮಿಸುವ ಜನಸಂದಣಿ ನಡುವೆ ದೇವಸ್ಥಾನದ ಮಹಾದ್ವಾರದಲ್ಲಿರುವ ಕೌಂಟರಿಗೆ ಲಡ್ಡುಗಳನ್ನು ಟ್ರೇಗಳಲ್ಲಿ ಸಾಗಿಸುವ ಮೂಲಕ ಅದರ ಶುಚಿತ್ವದ ಬಗ್ಗೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದೀಗ ಲಡ್ಡು ಸಾಗಾಣಿಕಾ ಲಿಫ್ಟ್ ಅಳವಡಿಸಲಾಗಿದ್ದು, ಇದರ ವೆಚ್ಚ ಸುಮಾರು ಸುಮಾರು 1.5 ಕೋಟಿ ರೂ.

ದೇವಸ್ಥಾನದ ಹೊರ ಆವರಣದ ಗೋಡೆಯಲ್ಲಿ ಈ ಸಾಗಾಣಿಕಾ ಲಿಫ್ಟನ್ನು ಅಳವಡಿಸಲಾಗಿದ್ದು, ಒಮ್ಮೆಗೆ 150 ಲಡ್ಡುಗಳನ್ನೊಳಗೊಂಡ 450 ಪೆಟ್ಟಿಗೆಗಳನ್ನು ಇದು ಸಾಗಿಸುತ್ತದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ರಾಜಶೇಖರ್ ರೆಡ್ಡಿ ಅವರು ಶನಿವಾರ ಲಡ್ಡು ಸಾಗಾಣಿಕಾ ಲಿಫ್ಟನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ಈ ಲಿಫ್ಟ್‌ನ ಉಪಯೋಗದಿಂದಾಗಿ ಹೆಚ್ಚು ಪಾತ್ರೆ ಮತ್ತು ಟ್ರೇಗಳ ಅಗತ್ಯವಿಲ್ಲ ಮತ್ತು ಇದರಿಂದ ಸಾಕಷ್ಟು ಸ್ಥಳವೂ ಉಳಿತಾಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೇಡಿಕೆಗೆ ಅನುಗುಣವಾಗಿ ನಾವು ಹೆಚ್ಚು ಲಡ್ಡುಗಳನ್ನು ತಯಾರು ಮಾಡಬಹುದಾಗಿದೆ. ಅಲ್ಲದೆ ಮುಖ್ಯದ್ವಾರದಲ್ಲಿ ಜನದಟ್ಟಣೆಯನ್ನು ಕಡಿಮೆಗೊಳಿಸಿ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶಿಸಲು ಸುಲಭವಾಗುವಂತೆ ಮಾಡುತ್ತದೆ ಎಂದು ದೇವಸ್ಥಾನದ ಅಧ್ಯಕ್ಷ ಕರುಣಾಕರ ರೆಡ್ಡಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ವಿವಿಧ ಹಂತಗಳ ಸಾಗಾಣಿಕೆಯ ಸಂದರ್ಭದಲ್ಲಿ ಮಾನವ ಸ್ಪರ್ಶದಿಂದಾಗಿ ಸಾಮಾನ್ಯವಾಗಿ ಲಡ್ಡುಗಳು ಗಾತ್ರ, ಆಕಾರ ಮತ್ತು ರುಚಿಯನ್ನು ಕಳೆದುಕೊಳ್ಳುತ್ತಿದ್ದವು. ಆದರೆ ಇನ್ನು ಲಡ್ಡುಗಳು ಶುಚಿ-ರುಚಿಯಾಗಿ ಲಭ್ಯವಾಗಲಿದೆ.

ಸಾಮಾನ್ಯ ದಿನಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನವು ಸುಮಾರು 1.40 ಲಕ್ಷ ಲಡ್ಡುಗಳನ್ನು ಉತ್ಪಾದಿಸುತ್ತಿದ್ದು, ಬ್ರಹ್ಮೋತ್ಸವ ಮುಂತಾದ ವಿಶೇಷ ದಿನಗಳಲ್ಲಿ ಇದರ ಉತ್ಪಾದನೆಯು ಮೂರು ಲಕ್ಷಕ್ಕೆ ಏರುತ್ತದೆ. ಈ ನೂತನ ಲಿಫ್ಟ್ 20 ಟ್ರೇ ಲೋಡರ‌್‌ಗಳು ಮತ್ತು 24 ಸಿಬ್ಬಂದಿಗಳ ಕೆಲಸವನ್ನು ನಿಭಾಯಿಸಲಿದ್ದು, ಅವರ ಸೇವೆಯನ್ನು ಬೇರೆ ಕಡೆ ಬಳಸಿಕೊಳ್ಳಲು ತಿರುಪತಿ ದೇವಸ್ಥಾನವು ಯೋಜಿಸಿದೆ.

ವೆಬ್ದುನಿಯಾವನ್ನು ಓದಿ