ಕೊರೋನಾ ಹೋರಾಟಕ್ಕೆ ರಾಜ್ಯಗಳಿಗೆ 1800 ಕೋಟಿ ಕಳಿಸಿದ ಕೇಂದ್ರ

ಶನಿವಾರ, 31 ಜುಲೈ 2021 (17:45 IST)
ದೆಹಲಿ(ಜು.31): ದೇಶದಲ್ಲಿ ಕೊರೋನಾ ಮೂರನೇ ಅಲೆಯ ಎಚ್ಚರಿಕೆ ಈಗಾಗಲೇ ನೀಡಲಾಗಿದ್ದು ನೆರೆ ರಾಜ್ಯ ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅತೀವ ಕಷ್ಟ ಅನುಭವಿಸಿದ ರಾಜ್ಯಗಳು ಇದೀಗ ಮೂರನೇ ಅಲೆಯನ್ನು ತಡೆಯಲು ಸಿದ್ಧತೆ ನಡೆಸುತ್ತಿವೆ.

•ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ 1800 ಕೋಟಿ ನೆರವು
•ಕೊರೋನಾ ವಿರುದ್ಧ ಹೋರಾಡಲು ಕೇಂದ್ರದ ಸಹಾಯ
ಕರ್ನಾಟಕ ಸೇರಿ ಮಹಾರಾಷ್ಟ್ರ, ದೆಹಲಿ ಮಳೆಯಿಂದಲೂ ಕಷ್ಟ ನಷ್ಟ ಅನುಭವಿಸಿದ್ದು, ಈ ಮಧ್ಯೆ ಕೊರೋನಾ ಭೀತಿಯೂ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಕೊರೋನಾವೈರಸ್ ವಿರುದ್ಧ ಹೋರಾಡಲು 1827.8 ಕೋಟಿಗಳನ್ನು ವಿತರಿಸಿದೆ ಎಂದು ಹೇಳಿದ್ದಾರೆ. ಇದು ಕೇಂದ್ರ ಸರ್ಕಾರದಿಂದ ಮಂಜೂರಾದ 'ತುರ್ತು ಕೋವಿಡ್ ಪ್ಯಾಕೇಜ್'ನ ಶೇಕಡಾ 15 ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ -19 ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ನಿಗದಿಪಡಿಸಿದ 1,827.80 ಕೋಟಿ (ಒಟ್ಟು 'ತುರ್ತು ಕೋವಿಡ್ ಪ್ರತಿಕ್ರಿಯೆ ಪ್ಯಾಕೇಜ್' ನ 15 %) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 31.4 ದಶಲಕ್ಷಕ್ಕೂ ಹೆಚ್ಚು ಬಳಕೆಯಾಗದ ಕೋವಿಡ್ -19 ಲಸಿಕೆ ಡೋಸ್ಗಳು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ನಿರ್ವಹಿಸಬೇಕಾದ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಿದೆ. ಎಲ್ಲಾ ಮೂಲಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 487.8 ದಶಲಕ್ಷ ಲಸಿಕೆ ಡೋಸ್ಗಳನ್ನು ಒದಗಿಸಲಾಗಿದೆ. 68,57,590 ಡೋಸ್ಗಳು ಪೈಪ್ಲೈನ್ನಲ್ಲಿವೆ ಎಂದು ಸಚಿವಾಲಯ ಹೇಳಿದೆ. ಇದರಲ್ಲಿ, ವ್ಯರ್ಥ ಸೇರಿದಂತೆ ಒಟ್ಟು 45,82,60,052 ಡೋಸ್ ಬಳಕೆ ಆಗಿದೆ.
ಒಂದೇ ದಿನ 41,649 ಹೊಸ ಪ್ರಕರಣ ಏರಿಕೆಯೊಂದಿಗೆ ಭಾರತದ ಕೋವಿಡ್ -19 ಸಂಖ್ಯೆ ಶನಿವಾರ 3,16,13,993 ಕ್ಕೆ ಏರಿಕೆಯಾಗಿದೆ.  ಸಾವಿನ ಸಂಖ್ಯೆ 4,23,810 ಕ್ಕೆ ಏರಿದ್ದು ಒಂದೇ ದಿನ 593 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಸೋಂಕನ್ನು ಪತ್ತೆಹಚ್ಚಲು ಶುಕ್ರವಾರ 17,76,315 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಿದೆ. ರಾಷ್ಟ್ರದಲ್ಲಿ ಇದುವರೆಗೆ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 46,64,27,038 ಕ್ಕೆ ತಲುಪಿದೆ.
ಕೋವಿಡ್ -19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವು ಈ ವರ್ಷ ಜೂನ್ 21 ರಿಂದ ಆರಂಭವಾಯಿತು. ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನವು ಈ ವರ್ಷ ಜನವರಿ 16 ರಂದು ಆರಂಭವಾಯಿತು. ಲಸಿಕಾ ಕೇಂದ್ರಗಳಲ್ಲಿ ಮುಂಗಡ ಕಾಯ್ದಿರಿಸಿ ಲಸಿಕೆ ಪಡೆಯಬಹುದಾಗಿದೆ. ಅದೇ ರೀತಿ ಹಲವು ಕಡೆ ಸ್ಪಾಟ್ ರಿಜಿಸ್ಟ್ರೇಷನ್ ಲಸಿಕೆ ಸೌಲಭ್ಯವೂ ಲಭ್ಯವಿದೆ. ಕೊರೋನಾ ಲಸಿಕೆ ಪಡೆಯಲು ಇಲ್ಲಿ ನೋಂದಣಿ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ