ರಾಜ್ಯದಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ: 6 ವರ್ಷಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಳ
ಶನಿವಾರ, 12 ಆಗಸ್ಟ್ 2023 (11:09 IST)
ರಾಜ್ಯದಲ್ಲಿ ಒಟ್ಟು 23 ಅರಣ್ಯ ಪ್ರದೇಶಗಳಿವೆ. ಈ ಪೈಕಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ 1,116 ಆನೆಗಳಿದ್ದು, ರಾಜ್ಯದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ಅರಣ್ಯವಾಗಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ 831, ಯಲ್ಲಾಪುರ, ಹಳಿಯಾಳ, ಕುದುರೆಮುಖ ಮತ್ತು ಭದ್ರಾವತಿ ಅರಣ್ಯದಲ್ಲಿ ಅತಿ ಕಡಿಮೆ ಆನೆಗಳಿವೆ.
ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 3, ಕುದುರೆಮುಖದಲ್ಲಿ 5 ಮತ್ತು ಭದ್ರಾವತಿಯಲ್ಲಿ 8 ಆನೆಗಳಿವೆ. ಇದರೊಂದಿಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ 706, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ 619 ಆನೆಗಳು ಪತ್ತೆಯಾಗಿದ್ದು, ರಾಜ್ಯದಲ್ಲಿರುವ ಒಟ್ಟು 6,395 ಆನೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ 5 ವರ್ಷಗಳಿಗೊಮ್ಮೆ ಅರಣ್ಯ ಇಲಾಖೆ ಆನೆ ಗಣತಿ ನಡೆಸಲಿದೆ. ಅದರಂತೆ ಕಳೆದ ಮೇ ತಿಂಗಳಲ್ಲಿ ಆನೆ ಗಣತಿ ನಡೆಸಲಾಗಿತ್ತು. ಗಣತಿಯನ್ವಯ ಬಂಡೀಪುರ ನಂ.1 ಆನೆಗಳ ಆವಾಸಸ್ಥಾನವಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿರುವ ಬಂಡೀಪುರ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ.