ಎಂ.ವೈ. ಪಾಟೀಲ್ ಪುತ್ರ ಅರುಣಕುಮಾರ ಪಾಟೀಲ್ ವಿರುದ್ಧ ದೂರು?

ಮಂಗಳವಾರ, 3 ಏಪ್ರಿಲ್ 2018 (18:13 IST)
ಅಫಜಲಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವ ಮಾಜಿ ಶಾಸಕ ಎಂ.ವೈ. ಪಾಟೀಲರ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಈಡಿಗ ಸಮಾಜ ಮುಂದಾಗಿದೆ.
ಅಫಜಲಪುರದಲ್ಲಿ ಆರು ಬಾರಿ ಶಾಸಕರಾಗಿ ಮಾಲೀಕಯ್ಯ ಗುತ್ತೇದಾರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಯಾವತ್ತೂ  ಎಂ.ವೈ.ಪಾಟೀಲ್ ಅಥವಾ ಅವರ ಕುಟುಂಬದವರ ಬಗ್ಗೆ ಏಕ ವಚನದಲ್ಲಿ ಮಾತನಾಡಿಲ್ಲ. ಹೀಗಿರುವಾಗ ಪಾಟೀಲ್ ಅವರ ಪುತ್ರ ಹಿರಿಯ ಶಾಸಕರು ಎನ್ನದೇ ಮಾಲಿಕಯ್ಯ ಗುತ್ತೇದಾರ ಅವರಿಗೆ ಬಾಯಿಗೆ ಬಂದಂತೆ ಅವಹೇಳನಕಾರಿ ಮಾತನಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಮುಖಂಡರೂ ಆಗಿರುವ ಹಾಗೂ ಶಾಸಕ ಮಾಲಿಕಯ್ಯ ಗುತ್ತೇದಾರ ಸಹೋದರರಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ಗುತ್ತೆದಾರ ಮಾತನಾಡಿ, ಅರುಣಕುಮಾರ ಪಾಟೀಲರ ವಿರುದ್ಧ ಚುನಾವಣೆ ಆಯೋಗಕ್ಕೆ ಮತ್ತು  ಪೊಲೀಸ್ ಇಲಾಖೆಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
 
ಜಿಲ್ಲೆಯಿಂದ ಗಡಿಪಾರು ಮಾಡಿ: ವಿಧಾನ ಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅವಹೇಳನ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ಅರುಣಕುಮಾರ ಪಾಟೀಲ್ ಅವರನ್ನು ಚುನಾವಣೆ ಮುಗಿಯುವವರೆಗೆ ಕಲಬುರಗಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
 
ಅರುಣಕುಮಾರ ಪಾಟೀಲ್ ಹೇಳಿದ್ದೇನು?
 
ಸರಣಿ ಕೊಲೆ ಮಾಡಿದ ರಾಕ್ಷಸ ಮಾಲೀಕಯ್ಯ ಗುತ್ತೇದಾರ ಜೈಲಿನಲ್ಲಿರಬೇಕಿತ್ತು. ಆದರೆ ವಿಧಾನಸೌಧದಲ್ಲಿದ್ದಾರೆ. ಗುತ್ತೇದಾರ್ ಕೋಣವಿದ್ದಂತೆ ಅದನ್ನು ಕಡಿಯಲೇಬೇಕು ಅನ್ನೋದು ಸೇರಿದಂತೆ ಮಾಲಿಕಯ್ಯ ಗುತ್ತೆದಾರ ಹಾಗೂ ಈಡಿಗ ಸಮಾಜದ ಕುರಿತಾಗಿ ಅರುಣಕುಮಾರ ಪಾಟೀಲ್ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಅದರ ಬೆನ್ನಲೆ ಈಡಿಗ ಸಮಾಜ ದೂರು ದಾಖಲಿಸಲು ಮುಂದಾಗಿದೆ.
 
ಅಫಜಲಪುರದಲ್ಲಿ ಕಳೆದ ನಾಲ್ಕು ದಶಕಗಳಿಂದ ಶಾಸಕ ಮಾಲೀಕಯ್ಯ ಗುತ್ತೇದಾರ ಹಾಗೂ ಮಾಜಿ ಶಾಸಕ ಎಂ.ವೈ.ಪಾಟೀಲ ರಾಜಕೀಯ ಎದುರಾಳಿಗಳಾಗಿದ್ದರು. ಅವರ ನಡುವಿನ ಕದನ ಈಗ ಪಾಟೀಲರ ಪುತ್ರ ಹಾಗೂ ಗುತ್ತೇದಾರರ ಸಹೋದರ ನಡುವೆ ಬಹಿರಂಗವಾಗಿ ಆರಂಭಗೊಂಡಿದೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ