ಗಗನಕ್ಕೇರಿದ ಟೊಮೆಟೊ ಬೆಲೆ!

ಗುರುವಾರ, 25 ನವೆಂಬರ್ 2021 (10:15 IST)
ಹಾಸನ : ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದ ಫಸಲು ಹಾನಿಯಾಗಿರುವುದಷ್ಟೇ ಅಲ್ಲದೇ ಸಾಗಣೆ ವೆಚ್ಚ ಅಧಿಕವಾಗಿ ತರಕಾರಿ ದರ ಗಗನಕ್ಕೇರಿದೆ.
ಇಂಧನ ದರ, ಎಲ್ಪಿಜಿ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ತರಕಾರಿ ತುಟ್ಟಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಆರ್ಭಟಿಸುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ತರಕಾರಿಗಳು ಕೊಳೆಯುತ್ತಿವೆ. ಫಸಲು ಮಣ್ಣು ಪಾಲಾಗುತ್ತಿರುವುದು ತರಕಾರಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವರ್ತಕರು. ಅದರಲ್ಲೂ ಟೊಮೆಟೊ ಬೆಲೆ ಪ್ರತಿದಿನ ಏರಿಳಿತ ಕಾಣುತ್ತಿದ್ದು, ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿ. 85ಕ್ಕೆ ಮಾರಾಟವಾದರೆ, ಈರುಳ್ಳಿ ಕೆ.ಜಿ. 60ಕ್ಕೇರಿದೆ.
ಹಾಸನ ತಾಲೂಕು ಸುತ್ತಮುತ್ತ, ಹಳೇಬೀಡು, ಬೇಲೂರು, ಅರಕಲಗೂಡು ಹಾಗೂ ಬೆಂಗಳೂರು ಕಡೆಗಳಿಂದ ನಗರಕ್ಕೆ ಟೊಮೆಟೊ ಬರುತ್ತದೆ. ಆದರೆ, ಮಳೆ ಕಾರಣದಿಂದಾಗಿ ಕೆಲವೆಡೆ ಬೆಳೆ ಹಾನಿಯಾಗಿದೆ. ಸ್ಥಳೀಯವಾಗಿ ಬೆಳೆಯುತ್ತಿದ್ದ ಟೊಮೆಟೊ ಈಗ ಮಾರುಕಟ್ಟೆಗೆ ಬಾರದ ಕಾರಣ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ