ಬೆಂಗಳೂರು(ಜುಲೈ 26): ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ನಿಜವಾಗುತ್ತಿದೆ. ತಾವು ರಾಜೀನಾಮೆ ನೀಡಲು ತೀರ್ಮಾನ ಮಾಡಿರುವುದಾಗಿ ಸ್ವತಃ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ಈ ವಿಚಾರವನ್ನು ಸ್ಪಷ್ಟಪಡಿಸಿದರು. ರಾಜೀನಾಮೆ ನೀಡುವಂತೆ ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ನೀಡಿತ್ತು.
ಇಂದು ಸಮಾರಂಭದ ಬಳಿಕ ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ನೀಡುತ್ತಿರುವುದಾಗಿ ಯಡಿಯೂರಪ್ಪ ಅವರು ಹೇಳಿದರು. ಇದೇ ವೇಳೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಾಧನಾ ಸಮಾವೇಶ ಆರಂಭಗೊಂಡಿತು. ಕಾರ್ಯಕ್ರಮದ ಬಳಿಕ ಯಡಿಯೂರಪ್ಪ ಅವರು ನೆರೆಪೀಡಿತ ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಹೋಗುವುದು ಪೂರ್ವನಿಗದಿಯಾಗಿತ್ತು. ಆದರೆ, ಹೈಕಮಾಂಡ್ನಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ದಿಢೀರನೇ ಉ.ಕ. ಪ್ರವಾಸ ರದ್ದು ಮಾಡಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವುದು ರಾಜೀನಾಮೆ ಸುದ್ದಿಯನ್ನು ಬಹುತೇಕ ಖಚಿತಗೊಳಿಸಿತ್ತು.
ಯಡಿಯೂರಪ್ಪ ಅವರ ಸಾಧನಾ ಸಮಾವೇಶಕ್ಕೆ ಮುನ್ನ ಸಿಎಂ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ಗೃಹ ಇಲಾಖೆಯು ಸರಕಾರದ ಸಾಧನೆಯ ವಿವರ ಇರುವ ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಯಡಿಯೂರಪ್ಪ ಜೊತೆಗಿದ್ದರು. ಇನ್ನು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮೂವರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವಥ ನಾರಾಯಣ ಮತ್ತು ಲಕ್ಷ್ಮಣ ಸವದಿ ಅವರು ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮ ಹೋರಾಟದ ಮನೋಭಾವದ ಬಗ್ಗೆ ಹೇಳಿಕೊಂಡರು. ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದ ಭಾವುಕ ಪ್ರಸಂಗವೂ ನಡೆಯಿತು. ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕೆಂದು ಕರೆ ಬಂದರೂ ರಾಜ್ಯದಲ್ಲೇ ನಿಂತು ಸಂಘಟನೆ ಕಟ್ಟಿದೆ ಎಂದು ಅವರು ಹೇಳುವಾಗ ಭಾವೋದ್ವೇಗದಿಂದ ಕಣ್ಣೀರಿಟ್ಟರು.
75 ವರ್ಷ ಮೀರಿದವರು ಕೇಂದ್ರ ಸಚಿವರಾಗಬಾರದು ಮತ್ತು ಸಿಎಂ ಆಗಬಾರದು ಎಂದು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದರು. ಆದರೆ ನನಗೆ ಮಾತ್ರ ಅದಕ್ಕೆ ವಿನಾಯಿತಿ ನೀಡಿ ಎರಡು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದೂ ಅವರು ಭಾವುಕರಾಗಿ ಹೇಳಿದರು. ಹಾಗೆಯೇ, ಮುಂದುವರಿದ ಅವರು ರಾಜೀನಾಮೆ ನಿರ್ಧಾರವನ್ನು ಗದ್ಗದಿತ ಕಂಠದಲ್ಲೇ ಘೋಷಣೆ ಮಾಡಿದರು. ಇದು ತಾನು ದುಃಖದಿಂದ ಹೇಳುತ್ತಿರುವುದಲ್ಲ, ಹೆಮ್ಮೆಯಿಂದ ಹೇಳುತ್ತಿರುವುದಾಗಿ ಅವರು ಸ್ಪಷ್ಟನೆಯನ್ನೂ ನೀಡಿದರು.
ಈ ಸಾಧನಾ ಸಮಾವೇಶದಿಂದ ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಆರ್ ಅಶೋಕ್, ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕ ಸಚಿವರು ಗೈರಾಗಿದ್ದದ್ದು ಗಮನಾರ್ಹ. ಹಾಗೆಯೇ, ಸಮಾವೇಶಕ್ಕೆ ಬಂದಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನ ಭೇಟಿಯಾಗಿದ್ದೂ ಕುತೂಹಲ ಮೂಡಿಸಿತು.
ಆದರೆ, ಯಡಿಯೂರಪ್ಪ ನಂತರ ಯಾರು ಕರ್ನಾಟಕದ ಸಿಎಂ ಆಗಲಿದ್ಧಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ಮೂಲದ ಪ್ರಕಾರ ಸಿಎಂ ಸ್ಥಾನದ ವಿಚಾರವಾಗಿ ಹೈಕಮಾಂಡ್ ಮುಖಂಡರು ಯಡಿಯೂರಪ್ಪ ಬಳಿ ಸಲಹೆಗಳನ್ನ ಕೇಳಿ ಪಡೆದಿದ್ದಾರಂತೆ. ಲಿಂಗಾಯತರನ್ನ ಮಾಡುವುದಾದರೆ ಬಸವರಾಜ ಬೊಮ್ಮಾಯಿ ಅವರನ್ನ ಮಾಡಿ. ದಲಿತರಾದರೆ ಗೋವಿಂದ ಕಾರಜೋಳ, ಒಕ್ಕಲಿಗರಾದರೆ ಆರ್ ಅಶೋಕ್ ಅವರನ್ನ ಸಿಎಂ ಮಾಡಿ ಎಂದು ಯಡಿಯೂರಪ್ಪ ತಮ್ಮ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಮತ್ತೊಂದು ಉನ್ನತ ಮೂಲದ ಪ್ರಕಾರ ಹೈಕಮಾಂಡ್ ಸಾಕಷ್ಟು ಅಳೆದು ತೂಗಿ ಲಿಂಗಾಯತರಿಗೆ ಸಿಎಂ ಪಟ್ಟ ಕಟ್ಟಲು ನಿರ್ಧರಿಸಿದೆಯಂತೆ. ಹೈಕಮಾಂಡ್ನ ಮನಸ್ಸಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಮತ್ತು ಲಕ್ಷ್ಮಣ ಸವದಿ ಅವರ ಹೆಸರುಗಳಿದ್ದು, ಪರಿಶೀಲನೆಯಾಗುತ್ತಿದೆ ಎನ್ನಲಾಗಿದೆ.