ಮಲೇರಿಯಾ ಲಸಿಕೆಗೆ ಸಮ್ಮತಿ

ಶನಿವಾರ, 9 ಅಕ್ಟೋಬರ್ 2021 (19:39 IST)
ಸರಿಸುಮಾರು ಶತಮಾನದಿಂದ ಇಡೀ ವಿಶ್ವವನ್ನು ಅದರಲ್ಲೂ ಪ್ರಮುಖವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳನ್ನು ನಿರಂತರವಾಗಿ ಕಾಡುತ್ತಾ ಬಂದಿರುವ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸುವ ಪ್ರಕ್ರಿಯೆಯಲ್ಲಿ ವೈದ್ಯಕೀಯ ಕ್ಷೇತ್ರ ಕೊನೆಗೂ ಯಶಸ್ಸು ಕಂಡಿದೆ.

ಸಂಶೋಧಕರ ಪಾಲಿಗೆ ಕಠಿನ ಸವಾಲಾಗಿ ಪರಿಣಮಿಸಿದ್ದ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.
ಎಲ್ಲ ವಯೋಮಾನದವರನ್ನು ಮಲೇರಿಯಾ ಕಾಯಿಲೆ ಕಾಡುತ್ತದೆಯಾದರೂ ಮಕ್ಕಳ ಪಾಲಿಗೆ ಇದು ಯಮದೂತನೇ ಸರಿ. ಬಡತನ ವ್ಯಾಪಕವಾಗಿರುವ ದೇಶಗಳಲ್ಲಿ ಪ್ರತೀ ವರ್ಷ ಈ ಕಾಯಿಲೆಯಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕ. ಅದರಲ್ಲೂ ಆಫ್ರಿಕನ್ ದೇಶಗಳಲ್ಲಿ ಮಲೇರಿಯಾ ಬಾಧೆ ಅಧಿಕವಾಗಿದ್ದು ನಿರಂತರವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಹಾನಿ ಸಂಭವಿಸುತ್ತಿರುತ್ತದೆ. ಮಲೇರಿಯಾಕ್ಕೆ ತುತ್ತಾಗುವ ಮಕ್ಕಳ ಪ್ರಾಣ ರಕ್ಷಣೆಗಾಗಿ ಕಳೆದ ಮೂರು ದಶಕಗಳಿಂದ ವಿವಿಧ ದೇಶಗಳ ವೈದ್ಯಕೀಯ ತಜ್ಞರು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಇದರ ಫಲವಾಗಿ ಕೆಲವೊಂದು ಲಸಿಕೆಗಳನ್ನು ಸಂಶೋಧಿಸಲಾಗಿತ್ತಾದರೂ ಅದರ ಪರಿಣಾಮಕತ್ವದ ಬಗೆಗೆ ಅನುಮಾನಗಳು ಮೂಡಿದ್ದರಿಂದಾಗಿ ಈ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಲಭಿಸಿರಲಿಲ್ಲ.
ಬ್ರಿಟನ್ನ ಫಾರ್ಮಾಸ್ಯುಟಿಕಲ್ ಕಂಪೆನಿಯಾದ ಗ್ಲ್ಯಾಕ್ಸೋಸ್ಮಿತ್ ಕ್ಲೈನ್ 1987ರಲ್ಲಿ ಅಭಿವೃದ್ಧಿಪಡಿಸಿದ ಮಾಸ್ಕ್ವಿರಿಕ್ಸ್ ಎಂಬ ಲಸಿಕೆಗೆ 31 ವರ್ಷಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಬಳಕೆಗೆ ಅನುಮತಿಯನ್ನು ನೀಡಿದೆ. ಮಲೇರಿಯಾ ರೋಗದ ಪ್ರಕರಣಗಳು ಅಧಿಕವಾಗಿರುವ ಆಫ್ರಿಕಾದ ದೇಶಗಳಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ಆದ್ಯತೆಯ ಮೇಲೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ