ಏನಾದ್ರೂ ಮಾಡ್ಕೊಳ್ಳಿ ಎಂದು ಶಾಸಕರ ಕಾವಲು ಕೆಲಸ ಬಿಟ್ಟು ಹೊರನಡೆದ ಡಿಕೆಶಿ ಸಹೋದರ
ಬುಧವಾರ, 23 ಮೇ 2018 (11:31 IST)
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರುವ ಮೊದಲೇ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಅಸಮಾಧಾನ ಭುಗಿಲೆದ್ದಿದೆ.
ಶಾಸಕರನ್ನು ಆಪರೇಷನ್ ಕಮಲಕ್ಕೆ ಸಿಲುಕದಂತೆ ಕಾಪಾಡಿಕೊಂಡು ಸೈ ಎನಿಸಿಕೊಂಡಿದ್ದ ಡಿಕೆ ಶಿವಕುಮಾರ್ ಮತ್ತು ಸಹೋದರ, ಸಂಸದ ಡಿಕೆ ಸುರೇಶ್ ಉಪ ಮುಖ್ಯಮಂತ್ರಿ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡಿದ್ದು, ಶಾಸಕರಿದ್ದ ರೆಸಾರ್ಟ್ ನಿಂದ ಏನಾದ್ರೂ ಮಾಡಿಕೊಳ್ಳಿ ಎನ್ನುತ್ತಾ ಕೋಪದಿಂದಲೇ ಹೊರ ನಡೆದಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲಾ ಕಷ್ಟಪಟ್ಟು ಶಾಸಕರನ್ನು ಹಿಡಿದುಕೊಂಡಿದ್ದಕ್ಕೆ ಪ್ರತಿಯಾಗಿ ಡಿಕೆಶಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಡಿಕೆಶಿ ಬಳಗದ ಆಗ್ರಹವಾಗಿತ್ತು. ಆದರೆ ಒಕ್ಕಲಿಗ ಸಮುದಾಯದವರಾದ ಡಿಕೆಶಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೈಕಮಾಂಡ್ ನಿರಾಕರಿಸಿದ್ದರಿಂದ ಡಿಕೆಶಿ ಸಹೋದರ ಸಿಟ್ಟಿಗೆದ್ದಿದ್ದಾರೆ.
ಯಾರೇ ಎಷ್ಟೇ ಸಮಾಧಾನಿಸಲು ಯತ್ನಿಸಿದರೂ ತಣ್ಣಗಾಗದ ಡಿಕೆ ಸುರೇಶ್ ಶಾಸಕರಿದ್ದ ರೆಸಾರ್ಟ್ ನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಅಂತೂ ಸರ್ಕಾರ ರಚನೆಯ ಮೊದಲೇ ಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಅಪಸ್ವರ ಶುರುವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.