ಇಂದು ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಪೂರ್ತಿ ಅಪ್ಡೇಟ್
ಶುಕ್ರವಾರ, 1 ಏಪ್ರಿಲ್ 2022 (07:33 IST)
ತುಮಕೂರು : ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣವಿದೆ.
ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ. ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ.
ಶಾ ಅವರು ಬೆಳಗ್ಗೆ 10-30ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿಯುತ್ತಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಮೊದಲು ಶ್ರೀಗಳ ಗದ್ದಿಗೆ ದರ್ಶನ ಹಾಗೂ ಪೂಜೆ ಮಾಡುತ್ತಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮ 11 ಗಂಟೆಯಿಂದ 1 ಗಂಟೆವರೆಗೂ ನಡೆಯುತ್ತದೆ.
ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತದೆ. ವೇದಿಕೆ ಮೇಲೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಾಧು ಸಂತರು ಸೇರಿದಂತೆ ಒಟ್ಟು 22 ಜನರಿಗೆ ಅವಕಾಶವಿದೆ.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ಮಾಡಲಾಗುತ್ತಿದೆ.
ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ.