6- 12ನೇ ತರಗತಿವರೆಗೆ ಶೇ.100ರಷ್ಟು ಹಾಜರಾತಿಗೆ ಅನುಮತಿ: ಬಿ.ಸಿ ನಾಗೇಶ್
ಶನಿವಾರ, 25 ಸೆಪ್ಟಂಬರ್ 2021 (08:49 IST)
ಬೆಂಗಳೂರು : ವಾರದ ಐದು ದಿನ 6ರಿಂದ 12ನೇ ತರಗತಿವರೆಗೆ ಶಾಲೆ, ಕಾಲೇಜುಗಳಲ್ಲಿ ಶೇ.100ರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಶನಿವಾರ ಮತ್ತು ಭಾನುವಾರದಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ.ಕೋವಿಡ್ 19 ತಜ್ಞರ ಸಲಹೆ, ಸೂಚನೆಯಂತೆ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಹಾಜರಾತಿಯೊಂದಿಗೆ ಶಾಲೆ, ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.
ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಸಹಕಾರ, ಕೋವಿಡ್-19 ಸುರಕ್ಷತಾ ನಿಯಮಗಳ ಪಾಲನೆ, ಯಶಸ್ವಿ ಕೋವಿಡ್-19 ಲಸಿಕೆ ಅಭಿಯಾನದಿಂದ ಕೋವಿಡ್-19 ಮೂರನೇ ಅಲೆಯ ಭೀತಿ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ 6ರಿಂದ 12ನೇ ವರ್ಗದವರೆಗಿನ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅನುಮತಿ ನೀಡಲಾಗಿದೆ ಎಂದರು.