ಬೆಂಗಳೂರು : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆಯ ಸುಳಿವನ್ನು ಇಂಧನ ಸಚಿವ ಸುನಿಲ್ ಕುಮಾರ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಶಿಫಾರಸು ಮಾಡಿದರೆ ದರ ಏರಿಕೆ ಮಾಡುವುದು ಅನಿವಾರ್ಯ. ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ಬಿಡಬ್ಲ್ಯೂಎಸ್ಎಸ್ಬಿ ಸೇರಿ ಬೇರೆ ಬೇರೆ ಇಲಾಖೆಗಳಿಂದ 12 ಸಾವಿರ ಕೋಟಿಯಷ್ಟು ಹಣ ಬಾಕಿ ಬರಬೇಕಿದೆ.
ಹೀಗಾಗಿ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯ. ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಮೊದಲು ದರ ಏರಿಕೆ ಬಗ್ಗೆ ಶಿಫಾರಸು ಮಾಡಲಿ, ನಂತ್ರ ಅದನ್ನು ಪರಿಶೀಲಿಸಿ ವಿದ್ಯುತ್ ದರ ಎಷ್ಟು ಏರಿಕೆ ಮಾಡ್ಬೇಕು ಅಂತಾ ನಿರ್ಧರಿಸುತ್ತೇವೆ ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ವಿಚಾರವಾಗಿ ಮಾತನಾಡಿ, ಮುಂದಿನ ವಾರ ದೆಹಲಿಗೆ ಭೇಟಿ ನೀಡುತ್ತೇನೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಅನುದಾನ ಬಿಡುಗಡೆ ಸರಿಯಾಗಿ ಆಗಿಲ್ಲ. ಈ ಬಗ್ಗೆ ಕೇಂದ್ರದ ಬಳಿ ಚರ್ಚಿಸಿ ಅನುದಾನ ದೊರಕಿಸಲು ಪ್ರಯತ್ನ ಪಡುತ್ತೇನೆ.