ಬೊರ್ಡ್ ಎಕ್ಸಾಂಗೆ ಸುಪ್ರೀಂ ಗ್ರೀನ್ ಸಿಗ್ನಲ್

ಮಂಗಳವಾರ, 28 ಮಾರ್ಚ್ 2023 (07:34 IST)
ನವದೆಹಲಿ : ರಾಜ್ಯ ಪಠ್ಯಕ್ರಮವಿರುವ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ (ಕುಸ್ಮಾ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
 
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ಕುಸ್ಮಾ ವಾದವನ್ನು ತಿರಸ್ಕರಿಸಿತು. ಕುಸ್ಮಾ ಪರ ವಾದ ಮಂಡಿಸಿದ ವಕೀಲರು, ಬೋರ್ಡ್ ಎಕ್ಸಾಂ ಅತಿ ಕಡಿಮೆ ಸಮಯದಲ್ಲಿ ಜಾರಿ ಮಾಡಲು ಹೊರಟಿದೆ.

ಈ ಬಗ್ಗೆ ಪೊಷಕರಿಗೂ ಮಾಹಿತಿ ಇಲ್ಲ. ಮತ್ತು ಶಾಲೆಗಳ ಜೊತೆಗೂ ಇಲಾಖೆ ಚರ್ಚೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಾದಿಸಿದರು. ಈ ವಾದವನ್ನು ಒಪ್ಪದ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ಅರ್ಜಿ ವಜಾ ಮಾಡಿತು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ಪೋಷಕರ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು. ಪೋಷಕರ ಮನವಿಗೆ ಸಮ್ಮತಿಸಿ 5 ಮತ್ತು 8ನೇ ತರಗತಿಯ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ರದ್ದುಪಡಿಸಿತ್ತು. 

ಈ ವೇಳೆ ಮಧ್ಯಪ್ರವೇಶ ಮಾಡಿದ ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಸದ್ಯ ಸುಪ್ರೀಂಕೋರ್ಟ್ ಅರ್ಜಿ ವಜಾ ಮಾಡಿರುವ ಹಿನ್ನೆಲೆ ಬೋರ್ಡ್ ಪರೀಕ್ಷೆಗಳು ಸರಾಗವಾಗಿ ನಡೆಯಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ