ಬೆಂಗಳೂರು (ಜು.03): ರೈತರ ಕೃಷಿ ಪಂಪ್ಸೆಟ್ಗಳಿಗೂ ವಿದ್ಯುತ್ ಮೀಟರ್ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡುವುದು, ಬಳಿಕ ನಿಧಾನವಾಗಿ ಸರ್ಕಾರದಿಂದ ರೈತರಿಗೆ ಮರುಪಾವತಿ ಮಾಡುವುದು ಸೇರಿ ಹಲವು ವಿವಾದಿತ ನಿಯಮವನ್ನು ಒಳಗೊಂಡ ವಿದ್ಯುತ್ ತಿದ್ದುಪಡಿ ಮಸೂದೆ-2021 ವಿರುದ್ಧ ಬೀದಿಗಿಳಿಯಲು ರೈತ ಸಂಘಟನೆಗಳು ಸಜ್ಜಾಗಿವೆ.
ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿದ್ಯುತ್ ಮಸೂದೆ-2021 ಪ್ರಕಾರ, ಕೃಷಿ ಪಂಪ್ಸೆಟ್ಗಳಿಗೂ ವಿದ್ಯುತ್ ಮೀಟರ್ ಅಳವಡಿಕೆಯಾಗಲಿದೆ. ಅಷ್ಟೇ ಅಲ್ಲ, ಈವರೆಗೆ 10 ಎಚ್ಪಿ ಪಂಪ್ಸೆಟ್ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದ ರೈತರೂ ಸೇರಿದಂತೆ ಎಲ್ಲರೂ ವಿದ್ಯುತ್ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ನಂತರ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು.
ಮಸೂದೆಯ ಕರಡು ನಿಯಮಗಳಲ್ಲಿರುವ ಈ ಪ್ರಸ್ತಾಪವು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಸೂದೆ ಜಾರಿಯಾದರೆ ವಿದ್ಯುತ್ ಸರಬರಾಜು ನಿಗಮಗಳು ಖಾಸಗಿ ಕಂಪನಿಗಳ ಕೈ ಸೇರಲಿವೆ. ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಶೋಷಣೆ ಮಾಡಲಿವೆ. ಇದರಿಂದ ಕೃಷಿ ಚಟುವಟಿಕೆಗಳನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿದ್ಯುತ್ ಪೂರೈಕೆ ಖಾಸಗೀಕರಣಕ್ಕೆ ಅಂಕಿತ ದೊರೆತರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ಸೆಟ್, ಬೀದಿ ದೀಪ, ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ. ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಿದರಂತೂ ಕೃಷಿಕರೂ ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್ಸೆಟ್ಗೆ ವಿದ್ಯುತ್ ಬಳಕೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಎದುರಾಗಲಿದೆ.
ಹೋರಾಟಕ್ಕೆ ರೈತ ಸಂಘಗಳ ನಿರ್ಧಾರ: ಇವೆಲ್ಲಾ ನಿಯಮಗಳಿಂದಾಗಿ ಮಸೂದೆಯು ಕೃಷಿಕರಿಗೆ ಮರಣಶಾಸನ್ಥವಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹೋರಾಟ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿವೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಆಗಸ್ಟ್ 10 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್ಗಳ ಒಕ್ಕೂಟದ ಜತೆ ಈಗಾಗಲೇ ಮಾತುಕತೆ ನಡೆಸಿದೆ. ಖಾಸಗೀಕರಣ ಪ್ರಸ್ತಾವನೆಯಿಂದ ಕೇಂದ್ರವು ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಹಿಂದೆ ಎಸ್.ಎಂ. ಕೃಷ್ಣ ಅವಧಿಯಲ್ಲೂ ರಾಜ್ಯದಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಗೆ ಸರ್ಕಾರ ಮುಂದಾಗಿತ್ತು. ಮೀಟರ್ ಅಳವಡಿಕೆ ಮಾಡಿ ಖಾಸಗಿಯವರಿಗೆ ಹಸ್ತಾಂತರಿಸಲು ಯತ್ನಿಸಿದ್ದರು. ಆಗ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದೆವು. ಇದೀಗ ಕೇಂದ್ರ ಸರ್ಕಾರವು 2019ರಿಂದಲೂ ವಿದ್ಯುತ್ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಒಂದೂವರೆ ವರ್ಷಗಳ ಕಾಲ ರೈತರಿಗೆ ಸಂಬಂಧಿಸಿದ ಯಾವುದೇ ಕಾಯಿದೆ ತಿದ್ದುಪಡಿ ತರದಂತೆ ತಡೆಯಾಜ್ಞೆ ನೀಡಿದೆ. ಇದೀಗ ಕೇಂದ್ರವು ನ್ಯಾಯಾಲಯದ ಗಡುವು ಮುಗಿದ ತಕ್ಷಣವೇ ರೈತರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು 2020ರ ವಿದ್ಯುತ್ ಕಾಯಿದೆಯನ್ನು ಅನುಷ್ಠಾನಗೊಳಿಸಲು 2021ರ ವಿದ್ಯುತ್ ತಿದ್ದುಪಡಿ ಕಾಯಿದೆ ಮಂಡಿಸಲು ಸಿದ್ಧವಾಗಿದೆ. ಈ ಬಗ್ಗೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಈ ಕುರಿತು ವಿದ್ಯುತ್ ಪ್ರಸರಣ ನಿಗಮಗಳ ಸಂಘಗಳೂ ನಮ್ಮನ್ನು ಸಂಪರ್ಕಿಸಿವೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಗ್ರಾಹಕರು, ಉದ್ಯೋಗಿಗಳಿಗೆ ಮರಣಶಾಸನ:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್ಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್. ರಾಮಕೃಷ್ಣಯ್ಯ ಪ್ರತಿಕ್ರಿಯಿಸಿ, ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪ ಗುತ್ತಿಗೆ ಹಾಗೂ ಫ್ರಾಂಚೈಸಿಗೆ ಅವಕಾಶವಿದೆ. ಈ ಮೂಲಕ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೇ ತಿದ್ದುಪಡಿ ಉದ್ದೇಶ. ಇನ್ನು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡಲು ಸರ್ಕಾರ ಮುಂದಾಗಿದೆ. ಈ ಮೊದಲು ಕೃಷಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುವ ವ್ಯವಸ್ಥೆಗೆ ಬದಲಾಗಿ ರೈತರಿಗೆ ನೇರವಾಗಿ ಸಹಾಯಧನ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಇದರ ಬಳಿಕ 50 ಕೆ.ಜಿ. ಯೂರಿಯಾ ಬೆಲೆ 75 ರಿಂದ 600 ರು., ಡಿಎಪಿ 175 ರಿಂದ 2 ಸಾವಿರ ರು.ಗಳಿಗೆ ಏರಿಕೆಯಾಗಿದೆ. ಇದೀಗ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯಾದರೆ ಕೃಷಿ ಕ್ಷೇತ್ರವೇ ಅಪಾಯಕ್ಕೆ ಸಿಲುಕಲಿದೆ ಎಂದು ಹೇಳಿದರು.
ಎಸ್.ಎಂ. ಕೃಷ್ಣ ಅವಧಿಯಲ್ಲೂ ರಾಜ್ಯದಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಗೆ ಸರ್ಕಾರ ಮುಂದಾಗಿತ್ತು. ಆಗ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದೆವು. ಇದೀಗ ಕೇಂದ್ರವು 2021ರ ವಿದ್ಯುತ್ ತಿದ್ದುಪಡಿ ಕಾಯಿದೆ ಮಂಡಿಸಲು ಸಿದ್ಧವಾಗಿದೆ. ಈ ಬಗ್ಗೆ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ.