ಅ.2ರಂದು ರಾಜ್ಯದ 31ನೇ ಜಿಲ್ಲೆಯಾಗಿ 'ವಿಜಯನಗರ' ಅಸ್ಥಿತ್ವಕ್ಕೆ
ಭಾನುವಾರ, 19 ಸೆಪ್ಟಂಬರ್ 2021 (11:32 IST)
ಬೆಂಗಳೂರು,ಸೆ.19 : ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯು ವಿದ್ಯುಕ್ತವಾಗಿ ಅಸ್ಥಿತ್ವಕ್ಕೆ ಬರಲಿದೆ.ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಬಳ್ಲಾರಿ ಜಿಲ್ಲೆಯಲ್ಲಿದ್ದ ಹೊಸಪೇಟೆ, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳನ್ನು ಜಿಲ್ಲೆಗೆ ಸೇರ್ಪಡೆಯಾಗಲಿವೆ.
ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು ಮತ್ತು ಮೂರು ಕಂದಾಯ ಉಪವಿಭಾಗಳಿದ್ದವು. ಸದ್ಯ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಿರುವ ಕಾರಣ ಆರು ತಾಲೂಕುಗಳು ಹೊಸ ಜಿಲ್ಲೆಗೆ ಸೇರ್ಪಡೆಯಾಗಿದೆ.ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಐದು ತಾಲೂಕುಗಳು ಉಳಿದಿವೆ. ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಮತ್ತು ಕುರಗೋಡು ತಾಲೂಕುಗಳು ಬಳ್ಳಾರಿ ಜಿಲ್ಲೆಯ ಭಾಗವಾಗಿ ಮುಂದುವರಿಯಲಿದೆ.
ಈ ಹಿಂದೆ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಆನಂದ್ ಸಿಂಗ್ ಒತ್ತಾಯ ಮಾಡಿದ್ದರು. ಆನಂದ್ ಸಿಂಗ್ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾದ ಬಳಿಕ 2019ರ ಸಪ್ಟೆಂಬರ್ ನಲ್ಲೇ ವಿಜಯನಗರ ನೂತನ ಜಿಲ್ಲೆಯ ಬಗ್ಗೆ ಸಿಎಂ ಬಿಎಸ್ ವೈ ಘೋಷಣೆ ಮಾಡಿದ್ದರು. ಆದರೆ ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಸದ್ಯ ವಿಜಯನಗರ ಕರ್ನಾಟಕದ 31ನೇ ಜಿಲ್ಲೆಯಾಗಿ ರಚನೆಯಾಗಿದೆ.
ಕಳೆದ ಫೆಬ್ರವ 8ರಂದು ಅಕೃತ ಘೋಷಣೆಯಾಗಿದ್ದ ವಿಜಯನಗರ ಜಿಲ್ಲೆಗೆ ಹಾಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಇಬ್ಬರು ಸೇರಿ ಸರಳವಾಗಿ ಚಾಲನೆ ನೀಡಲಿದ್ದಾರೆ.ಆರೇಳು ತಿಂಗಳ ಹಿಂದೆಯೇ ನೂತನ ಜಿಲ್ಲೆ ಘೋಷಣೆಯಾದರೂ ಯಾವುದೇ ವ್ಯವಸ್ಥೆಗಳನ್ನು ನೀಡಿರಲಿಲ್ಲ. ಅ.2ರಂದು ನೂತನ ಜಿಲ್ಲೆಗೆ ಚಾಲನೆ ಸಿಗುವ ಜತೆಗೆ ಬಸವರಾಜ್ ಬೊಮ್ಮಾಯಿಯವರು ನಾನಾ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಚಾಲನೆ ನೀಡಲಿದ್ದಾರೆ.
ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, ಈ ಭಾಗದ ಜನರಿಗೆ ಸಾಕಷ್ಟು ಖುಷಿ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳಿರುತ್ತವೆ. ಕಚೇರಿಗಳ ಕಾರ್ಯಾರಂಭ ಯುವ ಉತ್ಸಾಹಿ ಹಾಗೂ ಅನುಭವಿ ಅಕಾರಿಗಳನ್ನು ಕರೆತರುವುದು. ಈ ಭಾಗದ ಜನರು ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಬಳ್ಳಾರಿಗೆ ಅಲೆದಾಡುವುದನ್ನು ತಪ್ಪಿಸಿ, ಎಲ್ಲ ಸೌಲಭ್ಯಗಳನ್ನು ವಿಜಯನಗರದಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ ಎಂದಿದ್ದಾರೆ.
ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಆರಂಭ ಮಾಡುವ ಸಂದರ್ಭದಲ್ಲಾದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಗಳಾಗದಂತೆ ಜಿಲ್ಲೆಯನ್ನು ಕಟ್ಟುವ ಮೂಲಕ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಹೊಸಪೇಟೆಯ ಟಿಎಸ್ಪಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಜಿಲ್ಲಾಡಳಿತ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಈಗಾಗಲೇ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಕಾರಿಗನೂರ ಬಳಿಯ ಇಎಸ್ಐ ಕಟ್ಟಡದಲ್ಲಿ ಎಸ್ಪಿ ಕಚೇರಿ ಸ್ಥಾಪಿಸಲಾಗುತ್ತಿದೆ. ಟಿಎಸ್ಪಿ ಕಚೇರಿ ಆವರಣದಲ್ಲಿಯೇ 35 ಎಕರೆ ವಿಶಾಲ ಜಾಗದಲ್ಲಿ ಮೆಡಿಸಿಟಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ 110 ಕೋಟಿ ವೆಚ್ಚದ 250 ಹಾಸಿಗೆ ಆಸ್ಪತ್ರೆ, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜುಗಳಿರಲಿವೆ ಎಂದು ತಿಳಿಸಿದ್ದಾರೆ.