ಪ್ರೀತಿ ಎಂಬೋ ಸವಿನೆನಪುಗಳ ಮಾತು ಮಧುರ...

PR
PR
ಮತ್ತೊಂದು ಪ್ರೇಮಿಗಳ ದಿನ ಬರುತ್ತಿದೆ... ಮತ್ತೆ ಅದೇ ನೆನಪು, ನೀನು ಅಂದು ನನಗೆ ನೀಡಿದ ಗ್ರೀಟಿಂಗ್ಸ್ ಇಂದೂ ನನ್ನೊಟ್ಟಿಗಿದೆ. ಜಾತಿ ಮತಗಳನ್ನು ಮೀರಿ ಪ್ರೇಮಿಸಿ, ಒಂದಾಗುವವರನ್ನು ನೋಡಿದ್ದೇವೆ. ಆದರೆ ನಾವು ಒಂದೇ ಜಾತಿಯವರಾಗಿ ಒಂದಾಗದೇ ಹೋಗಿದ್ದು ವಿಪರ್ಯಾಸವೇ ಸರಿ.

"ಪಾನಿ" ಹೆಸರೇ ಎಷ್ಟೊಂದು ವಿಚಿತ್ರವಾಗಿದೆಯಲ್ಲವೇ ಪ್ರಿಯೇ. ನಿನ್ನ ಮತ್ತು ನನ್ನ ಮೊದಲ ಹೆಸರುಗಳನ್ನು ಕೂಡಿಸಿ ನಾನೇ ಸೃಷ್ಟಿಸಿದ ಹೆಸರು. ಹಿಂದಿ ಭಾಷೆಯಲ್ಲಿ ನೀರು ಎಂದರ್ಥ. ಹೌದು, ಈ ಹೆಸರೂ ಅನ್ವರ್ಥಕವೇ ಸರಿ. ನೀರಿನಷ್ಟೇ ಸ್ಪಷ್ಟ, ಕೋಮಲವಾದ ಪ್ರೀತಿ ನಮ್ಮದಾಗಿತ್ತು. ನಮ್ಮ ಪ್ರೀತಿಯ ಬಗ್ಗೆ ಈಗ ಕೆಲವೊಂದು ಬಾರಿ ಯೋಚಿಸಿ ನನ್ನಷ್ಟಕ್ಕೇ ನಕ್ಕಿದ್ದೂ ಸಹ ಇದೆ. ಡಿಗ್ರಿ ಓದುತ್ತಿದ್ದ ನಾನು ಹಾಗೂ ಎರಡನೇ ಪಿಯುಸಿ ಓದುತ್ತಿದ್ದ ನೀನು. ನಮ್ಮ ಕಾಲಮೇಲೆ ನಿಲ್ಲಲೂ ಶಕ್ತವಾಗಿಲ್ಲದ ವಯಸ್ಸು. ಆದರೂ ಆ ಮೊದಲ ಪ್ರೀತಿ ಇಂದಿಗೂ ಮಧುರ. ನಾನು ಜೀವನದಲ್ಲಿ ಮೊದಲಬಾರಿ ಹಾಗೂ ಇಲ್ಲಿಯವರೆಗೆ ಮನಸ್ಸನ್ನು ನೀಡಿದ್ದು ನಿನಗೇ ಕಣೇ.. ನಿನ್ನ ಕಾಲೇಜಿನ ಸನಿಹದಲ್ಲೇ ಇದ್ದ ನಮ್ಮ ಹಾಸ್ಟೆಲ್ ನಮ್ಮ ಪ್ರೇಮಕ್ಕೆ ಇಂಬು ಕೊಟ್ಟಿದ್ದಂತೂ ನಿಜ. ಆ ಕಾರಣಕ್ಕೇ ಅಲ್ಲವೇ ನಮ್ಮ ಪ್ರೀತಿ ಬೆಳೆದಿದ್ದು!.

ನೀನು ಧರಿಸುತ್ತಿದ್ದ ಬಿಳಿ ಸ್ವೆಟರ್ ನನಗೆ ಇನ್ನೂ ನೆನಪಿದೆ. ಚಳಿ ಬಿಸಿಲೆನ್ನದೇ ನೀನು ಧರಿಸುತ್ತಿದ್ದ ಆ ಸ್ವೆಟರ್‌ನಿಂದಲೇ ನಾನು ನಿನ್ನನ್ನು ಬಹು ದೂರದಿಂದ ಗುರುತಿಸುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಮನಸ್ಸಿನ ತಳಮಳ, ನನ್ನ ಕಾತುರ, ನಿನ್ನ ಆಗಮನವನ್ನೇ ನಿರೀಕ್ಷಿಸುತ್ತಿದ್ದ ನನ್ನ ಕಣ್ಣುಗಳು.... ಇವೆಲ್ಲಾ ಮಧುರ ನೆನಪುಗಳು ಇನ್ನೂ ನನ್ನ ಕಣ್ಮುಂದೆಯೇ ಇದೆ. ನೀನು ಒಂದು ಮಗುವಿನ ತಾಯಿ. ಅಂದು ಮನಸ್ಸನ್ನು ನನಗೆ ಧಾರೆಯೆರೆದಿದ್ದ ನೀನು ಇಂದು ಮತ್ತೊಬ್ಬನ ಆಸ್ತಿ. ಆದರೆ ನಮ್ಮ ಆ ಮಧುರ ಪ್ರೀತಿಯ ನೆನಪುಗಳು ಇನ್ನೂ ಚಿರನೂತನ.

ಜೀವನದಲ್ಲಿ ಪ್ರೀತಿಯ ಸುಳಿಯಲ್ಲಿ ಸಿಕ್ಕಲಾರದ ಮನುಷ್ಯ ಇರಲಾರನೇನೋ? ನಾನೆಂದೂ ನಿನ್ನ ನಂತರ ಮತ್ತೊಬ್ಬ ಹೆಣ್ಣನ್ನು ಪ್ರೀತಿಸಿಲ್ಲ. ಇದೀಗ ಜೀವನ ಸಂಗಾತಿಯ ಅನ್ವೇಷಣೆಯಲ್ಲಿರುವ ನನಗೆ, ನಿನ್ನ ನೆನಪುಗಳು ಎಂದೂ ಮಾಸಲಾರವೇನೋ. ಸಿನೆಮಾ, ಪಾರ್ಕ್‌ನಲ್ಲಿ ಕೈ ಹಿಡಿದು ಸುತ್ತಾಡುವುದೇ ಪ್ರೀತಿಯೆಂದು ಭಾವಿಸುವ ಇಂದಿನ ಯುವಜನರ ಭಾವನೆಗೂ ನಮಗೂ ಅಜಗಜಾಂತರ ವ್ಯತ್ಯಾಸವಿತ್ತು. ನಾವು ಎಂದಿಗೂ ಪಾರ್ಕ್‌ಗೆ ಹೋಗಲಿಲ್ಲ, ಸಿನೆಮಾಕ್ಕಂತೂ ಇಲ್ಲವೇ ಇಲ್ಲ. ಕೇವಲ ಹೃದಯಗಳ ಪಿಸುಮಾತು, ಮೋಹಕ ನಗೆ, ಕಣ್ಣುಗಳ ಮಿಲನ, ಕೆಲವೇ ಕೆಲವಷ್ಟು ಮಾತು ಇವಕ್ಕೇ ಸೀಮಿತವಾಗಿತ್ತು. ಪ್ರೀತಿ ಇಷ್ಟಕ್ಕೇ ಸೀಮಿತವೇ ಎನ್ನುವುದೂ ಇಲ್ಲಿ ಪ್ರಶ್ನೆಯೇ? ಆದರೆ ಪ್ರೀತಿಗೆ ಎಲ್ಲಿ ನಿಯಮಗಳಿವೆ ಪ್ರಿಯೇ?... ಪ್ರೀತಿ ಎಂದಾದರೂ ಹೇಳಿ ಕೇಳಿ ಬರುತ್ತದೆಯೇ. ಇಲ್ಲಿಯವರೆಗೆ ಯಾವ ನಿಯಮಗಳ ಚೌಕಟ್ಟಿನಲ್ಲಿ ಬಂಧಿತವಾಗದ ವಸ್ತು ಪ್ರೀತಿಯೇ ಏನೋ.....

ನಿನ್ನ ಕಾಲೇಜಿನ ವಾರ್ಷಿಕೋತ್ಸವದ ದಿನ ನೀನು ಮಾಡಿದ ಡ್ಯಾನ್ಸ್, ನಿನ್ನ ಫೋಟೋ ಪಡೆಯುವ ಉದ್ದೇಶದಿಂದ ನಾನು ಫೋಟೋಗ್ರಾಫರ್ ಬಳಿ ಹೋಗಿ ಪತ್ರಕರ್ತನೆಂದು ಸುಳ್ಳು ಹೇಳಿ, ವರದಿ ಮಾಡುವ ನೆಪವೊಡ್ಡಿ ನೀನು ಇರುವ ಫೋಟೋವನ್ನು ಪಡೆದದ್ದು ಇನ್ನೂ ನೆನಪಿನಲ್ಲುಳಿದಿದೆ. ಅದನ್ನು ನೆನಸಿಕೊಂಡು ಇಂತಹ ಹುಚ್ಚಾಟಕ್ಕಿಳಿದ್ದಿದ್ದಿನಾ ಎಂದು ನನ್ನನ್ನು ಪ್ರಶ್ನಿಸಿಕೊಂಡದ್ದೂ ಇದೆ. ಬಹುಶಃ ಇಂತಹ ಕೆಲಸವನ್ನು ಇನ್ನೆಂದೂ ಮಾಡಲಾರನೇನೋ. ಆದರೆ ಪ್ರೀತಿ ಎಂಬುದು ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಇಂತಹ ಚಿಕ್ಕ ಘಟನೆಗಳೇ ಸಾಕ್ಷಿ. ಅಂತೂ ನಾನು ಜೀವನದಲ್ಲೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದೆ ಮತ್ತು ಅದಕ್ಕೆ ಕಾರಣ ನೀನು ಎನ್ನುವುದು ನನ್ನ ಜೀವನದ ಇತಿಹಾಸದಲ್ಲಿ ದಾಖಲಾಗಿಬಿಟ್ಟಿದೆ ಬಿಡು.

ನನ್ನ ಹಲವಾರು ಕವನಗಳ ಸ್ಪೂರ್ತಿ ನೀನೇ ಅಲ್ಲವೇ... ನನ್ನ ಕನಸಿನ ಸಾಮ್ರಾಜ್ಯದ ಒಡತಿ ನೀನೇ ಆಗಿದ್ದೆ. ಹೋಗಲಿ ಬಿಡು, ಅವೆಲ್ಲಾ ಕನಸುಗಳು ನನಸಾಗುವ ಸಂದರ್ಭ ಒದಗಿ ಬರಲೇ ಇಲ್ಲ. ನೀನು ಸಂಗಾತಿಯಾಗಿದ್ದರೆ ಬಹುಶಃ ಪ್ರೇಮಕ್ಕೆ ಅರ್ಥ ಬರುತ್ತಿದ್ದಿರಬಹುದು. ಆದರೂ ಪ್ರೇಮ ಮದುವೆಯಲ್ಲೇ ಕೊನೆಗೊಳ್ಳಬೇಕೆಂಬ ನಿಯಮವಂತೂ ಇಲ್ಲವಲ್ಲ. ಮತ್ತೊಂದು ಪ್ರೇಮಿಗಳ ದಿನ ಬರುತ್ತಿದೆ. ಪ್ರೇಮಿಗಳಿಗೆ ವಿಶೇಷ ದಿನದ ಅಗತ್ಯತೆಯೂ ಇಲ್ಲ. ಎಲ್ಲೋ ಇರುವ ನನಗೆ, ಕಾರ್ಯದೊತ್ತಡದ ನಡುವೆಯೂ ಜೀವನದ ಯಾವುದೋ ಘಟ್ಟದಲ್ಲಿ ಅಂಕುರಿಸಿದ್ದ ನಮ್ಮ ಪ್ರೀತಿ ಅಂದಾದರೂ ನೆನಪಾಗುತ್ತದೆ. ಬಹುಶಃ ನಮ್ಮ ಪ್ರೀತಿ ಮತ್ತು ನಮ್ಮ ಸಂಪರ್ಕ ತಪ್ಪಿ ಹೋಗಿ ದಶಕಗಳೇ ಕಳೆದಿರಬಹುದು. ಆದರೆ "ಪ್ರೇಮಿಗಳ ದಿನ" ಆ ಸುಮಧುರ ನೆನಪುಗಳನ್ನು ಮತ್ತೆ ನೆನಪಿಗೆ ತರುತ್ತದೆ. ಅಷ್ಟರ ಮಟ್ಟಿಗೆ ನನಗೆ ಪ್ರೇಮಿಗಳ ದಿನ ಅರ್ಥಪೂರ್ಣ..

ವೆಬ್ದುನಿಯಾವನ್ನು ಓದಿ