ಪ್ರಣಯ ಹಕ್ಕಿಗಳಿಗೊಂದು ಪ್ರೇಮದಿನ

ರಜನಿ ಭಟ್
WD
ಪ್ರೀತಿ ಎನ್ನುವುದು ವರ್ಣಿಸಲಾಗದ ಭಾವನೆ. ಪ್ರೀತಿಗೆ ಸಾವಿರ ಅರ್ಥಗಳು. ಅದನ್ನು ತೋರ್ಪಡಿಸಲು ನೂರಾರು ಬಗೆ. ಇದಕ್ಕೆ ಒಂದು ಜಾಗ ಇಲ್ಲ. ಇದನ್ನು ಕಲ್ಪಿಸಲೂ ಅಸಾಧ್ಯ. ಪ್ರೀತಿ ಎಲ್ಲೂ ಹುಟ್ಟಬಹುದು. ಇದೊಂದು ಅನಾದಿ, ಅನಂತ. ಒಟ್ಟಿನಲ್ಲಿ ಪದಪುಂಜ ಎನ್ನುವುದೇ ಇಲ್ಲ ಇದನ್ನು ವರ್ಣಿಸಲು.

ಪ್ರಣಯ ಹಕ್ಕಿಗಳ ಪ್ರೇಮದಿನವೇ ಪ್ರೇಮಿಗಳ ದಿನ. ಇಲ್ಲಿ ಪ್ರೇಮಿಗಳೆಂದರೆ ಒಬ್ಬರನ್ನೊಬ್ಬರು ಪ್ರೀತಿಸುವವರು ಯಾರಾದರೂ ಆಗಿರಬಹುದು. ಆದರೆ ಇಲ್ಲಿ ಪ್ರೇಮಿಗಳೆಂದರೆ ಹದಿಹರೆಯಕ್ಕೆ ಕಾಲಿಟ್ಟ ಯುವಕ ಯುವತಿಯರೆಂದೇ ಪರಿಗಣಿಸಲಾಗಿದೆ. ಪ್ರೇಮಿಗಳಿಗಾಗಿ ಜಗತ್ತು ಕೊಟ್ಟ ಅದ್ಭುತ ಕೊಡುಗೆಯೆಂದರೆ ಇದೇನೇ. ಪ್ರೇಮಿ ತನ್ನ ಎದೆ ಚಿಪ್ಪಿನಲ್ಲಿ ಬಚ್ಚಿಟ್ಟ ಅದಮ್ಯ ಬಾವನೆಗಳನ್ನು ತನ್ನ ಪ್ರೀತಿಪಾತ್ರರಿಗೆ ಪ್ರಚುರಪಡಿಸಲು ಸಿಗುವ ಒಂದು ಉತ್ತಮ ಅವಕಾಶ. ಎಲ್ಲೆಂದರಲ್ಲಿ ಇದನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಪ್ರೇಮಿಗಳ ದಿನದಂದು ಅದನ್ನು ಆಚರಿಸುವ ಪರಿಯೇ ಬೇರೆ. ಕೆಂಪು ಗುಲಾಬಿಯು ಪ್ರೀತಿಯ ಸಂಕೇತ. ಕೆಂಪು ಗುಲಾಬಿ ಮಾತ್ರವೇ ಅಲ್ಲ, ಕೆಂಪು ಬಣ್ಣದ ಯಾವುದೇ ವಸ್ತುವಾಗಿದ್ದರೂ ಅದು ಪ್ರೀತಿಯ ಸಂಕೇತವಾಗಿದೆ. ಕೆಂಪು ಬಣ್ಣವು ನಮ್ಮ ಹೃದಯವನ್ನು ಪ್ರತಿನಿಧಿಸುತ್ತದೆ. ಈ ಹೃದಯವು ಪ್ರೀತಿಯ ಅಡಗುತಾಣ. ಹಾಗೆಯೇ ಉದ್ಭವ ಸ್ಥಾನ. ಈ ಪ್ರೇಮಿಗಳ ದಿನದಂದು ಎಲ್ಲಿ ನೋಡಿದರಲ್ಲಿ ಕೆಂಪು. ಒಬ್ಬ ಹುಡುಗ ಇನ್ನೊಂದು ಹುಡುಗಿಗೆ ಕೆಂಪು ಗುಲಾಬಿ ಅಥವಾ, ಕೆಂಪು ಬಣ್ಣದ ಯಾವುದೇ ವಸ್ತುವನ್ನು ಉಡುಗೊರೆಯಾಗಿ ಕೊಟ್ಟು, ತಮ್ಮ ಪ್ರೇಮನಿವೇದನೆಯನ್ನು ಮಾಡಿಕೊಳ್ಳುವ ಸುದಿನ. ಹದಿಹರೆಯದವರು ಎಲ್ಲಿರುತ್ತಾರೋ ಅಲ್ಲೆಲ್ಲಾ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.

ಯಾರೇ ಆಗಿರಲಿ ಪ್ರೀತಿಸುವುದು ತಪ್ಪಲ್ಲ. ಆದರೆ ಪ್ರೀತಿ ನಿಜವಾದುದಾಗಿರಬೇಕು. ಕೇವಲ ದೈಹಿಕ ಆಕರ್ಷಣೆಯಾಗಿರಬಾರದು. ಪ್ರೀತಿಯಲ್ಲಿ ಮೇಲು-ಕೀಳು ಇಲ್ಲ. ಬಡವ ಶ್ರೀಮಂತವೆಂಬುದೂ ಇಲ್ಲ. ಆದರೆ ಪ್ರೀತಿಯು ನಿಜವಾಗಿದ್ದು ಒಬ್ಬರಿಗೊಬ್ಬರು ಜೀವಕೊಡುವವರೆಗೆ ಇರಬೇಕು. ಜೀವನದ ಆಟ ಆಗಿರಬಾರದು. ಇದರಲ್ಲಿ ಮುಗ್ಧತೆ ತುಂಬಿರಬೇಕು. ನಿಜವಾದ ಪ್ರೀತಿ ಎಲ್ಲಿರುತ್ತೋ, ಅಲ್ಲಿ ತ್ಯಾಗ ಮವನೋಭಾವವಿರುತ್ತೆ. ಪ್ರಾಮಾಣಿಕತೆ ಸತ್ಯಸಂಧತೆ ಇರುತ್ತೆ. ಹಾಗಾಗಿ ನಿರ್ಮಲವಾದ ಪ್ರೀತಿ ಇದ್ದಲ್ಲಿ, ಒಬ್ಬರನ್ನೊಬ್ಬರು ಅರ್ಥೈಸಿಕೊಂಡಲ್ಲಿ ಪ್ರೀತಿಸುವುದು ತಪ್ಪೇನೂ ಅಲ್ಲ.

ಆದರೆ ಇಂದು ಪ್ರೇಮಿಗಳ ದಿನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇಂದು ಪ್ರೀತಿ ಎಂದರೆ ಕೇವಲ ದೈಹಿಕ ಆಕರ್ಷಣೆಯಾಗಿದೆ. ಇದನ್ನು ಅರಿಯದ ಅನೇಕ ಮುಗ್ಧರು ಬದುಕನ್ನೇ ಕಹಿಯಾಗಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ತ್ಯಾಗದ ಮನೋಭಾವನೆ ಇಲ್ಲದೆ ಧನದಾಹದ ಮನೋಭಾವನೆ ಉಂಟಾಗಿದೆ. ಹಾಗಾಗಿ ಇಂದು ಪ್ರೇಮಿಗಳ ದಿನ ಎಂದರೆ ಹುಚ್ಚುಕೋಳಿಗಳ ದಿನ ಎಂದೇ ಹೇಳಬಹುದು. ಕವಿಯೊಬ್ಬರು ಹೇಳುವಂತೆ 'ಹುಚ್ಚು ಕೋಳಿ ಮನಸು ಅದು ಹದಿನಾರರ ವಯಸು' ಎನ್ನುವಂತೆ ಇಲ್ಲಿ ಪ್ರೀತಿಗೆ ಒಂದು ಅರ್ಥವಿರುವುದಿಲ್ಲ. ಬುದ್ಧಿ ಬಲಿತು ಪ್ರೀತಿಯ ನಿಜಾರ್ಥ ತಿಳಿದಾಗ ಪ್ರೀತಿ ಮಾಡಿದ ಹುಡುಗ ಹುಡುಗಿಗೆ ತಾವು ಮಾಡಿದ್ದು ತಪ್ಪು ಅನ್ನಿಸುತ್ತದೆ. ಆವಾಗ ಬಿರುಕು, ಫಲವಾಗಿ ಜೀವನದಲ್ಲಿ ಒಡಕು.

ಪ್ರೀತಿಸಬೇಕು, ಆದರೆ ಬುದ್ಧಿ ಬಲಿತ ಮೇಲೆ. ಇಲ್ಲಿ ಪ್ರೀತಿಸುವವರು ಪರಸ್ಪರರನ್ನು ಅರ್ಥ ಮಾಡಿಕೊಂಡಿರುತ್ತಾರೆ. ಕೇವಲ ದೈಹಿಕ ಆಕರ್ಷಣೆಯಿರುವುದಿಲ್ಲ. ಒಬ್ಬರಿಗೊಬ್ಬರು ತ್ಯಾಗದ ಮನೋಭಾವನೆಯಿಂದ, ಪ್ರಾಮಾಣಿಕತೆಯಿಂದ ಕೂಡಿರುತ್ತಾರೆ. ಇವರಿಗೆ ಬದುಕಿನಲ್ಲಿ ಮುನ್ನುಗ್ಗಿ ನಡೆಯುವ ಛಲವಿರುತ್ತದೆ. ಇಂಥವರ ಬಾಳು ಅಮೃತದ ಸುಧೆಯಾಗಿರುತ್ತದೆ. ಇಲ್ಲಿ ಜಾತಿ ಭೇದಗಳ ಅಂತರವಿರದೆ, ಬಡವ ಬಲ್ಲಿದನೆಂಬ ಭೇದವಿರದೆ, ಮಾನವೀಯ ಸಂಬಂಧಗಳಷ್ಟೇ ಇರುತ್ತದೆ. ಇದು ನಿರ್ಮಲ, ಅತಿ ಮಧುರ.

ಪ್ರೀತಿಯ ಬಗ್ಗೆ ವರ್ಣಿಸದ, ಪ್ರೇಮಿಗಳ ಬಗ್ಗೆ ಹೇಳದ ಕವಿಗಳು ಹಿಂದೂ ಇರಲಿಲ್ಲ, ಮುಂದೂ ಇರುವುದಿಲ್ಲ. ಪ್ರೀತಿಗೆ ಅದರಲ್ಲೂ ಪ್ರೇಮಿಗಳಿಗೆ ಒಂದು ಉತ್ಕೃಷ್ಟ ಸ್ಥಾನವಿದೆ. ಪ್ರೀತಿಯ ಜಗತ್ತಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರೋಮಿಯೋ ಜ್ಯೂಲಿಯೆಟ್ ಆಗಿರಬಹುದು, ದುಶ್ಯಂತ ಶಕುಂತಲೆಯಾಗಿರಬಹುದು, ಅಥವಾ ಲೈಲಾ ಮಜ್ನುವೇ ಆಗಿರಬಹುದು. ಎಲ್ಲದಕ್ಕೂ ಅದರದೇ ಆದ ಅಮರ ಕಥೆಯಿದೆ. ಆದ್ದರಿಂದ ಪ್ರೇಮಿಗಳ ದಿನವನ್ನು ಮಹತ್ವದ ದಿನವನ್ನಾಗಿಸುವುದು ಎಲ್ಲರ ಆದ್ಯ ಕರ್ತವ್ಯ. ಪ್ರೀತಿ ಎನ್ನುವುದು ಆಟಿಕೆಯಾಗದೆ ಬಂಧನದ ಬೆಸುಗೆಯಾಗಬೇಕು.

ಒಟ್ಟಿನಲ್ಲಿ ಪ್ರಣಯ ಹಕ್ಕಿ ಜೋಡಿಗೆ, ಅವರ ಪ್ರೀತಿಗೆ ಯಶಸ್ಸು ಸಿಗಲೆಂದು ಹಾರೈಸುತ್ತಾ, ಪ್ರೇಮಿಗಳ ದಿನವನ್ನು ನೀಡಿದ ಜಗತ್ತಿಗೆ ಅನಂತಾನಂತ ಥಾಂಕ್ಸ್.