ಪ್ರೇಮದ ಪ್ರಾಮಾಣಿಕತೆ ಪರೀಕ್ಷೆಗೆ ಲವ್ ಮೀಟರ್!

ಶನಿವಾರ, 16 ಫೆಬ್ರವರಿ 2008 (16:09 IST)
ವ್ಯಾಲೆಂಟೈನ್ಸ್ ವಾರವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಹಲವರು ಹಲವರಿಗೆ ಪ್ರಪೋಸ್ ಮಾಡಿದ್ದಾಗಿದೆ, ಪ್ರೇಮ ಯಾಚನೆ ಮಾಡಿಯೂ ಆಗಿದೆ, ಕೆಲವರು ಗೆದ್ದಿದ್ದಾರೆ, ಹಲವರು ಬಿದ್ದಿದ್ದಾರೆ. ಗೆದ್ದೆವು ಎಂದು ಹೇಳಿಕೊಳ್ಳುತ್ತಿರುವವರಿಗೆ ತಾವು ಎಷ್ಟರ ಮಟ್ಟಿಗೆ ಗೆದ್ದಿದ್ದೇವೆ ಅಂತ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ ಈ ಸುದ್ದಿ.

ನಿಮ್ಮೆದುರು ಹೃದಯ ಬಿಚ್ಚಿಟ್ಟು ಪ್ರೇಮ ಯಾಚನೆ ಮಾಡಿದವರ ಮನಸ್ಸು ಎಷ್ಟು ಪ್ರಾಮಾಣಿಕ ಎಂಬುದನ್ನು ತಿಳಿಯುವಂತಾದರೆ ಮುಂದೆ ಎಲ್ಲವೂ ವಿನ್ ವಿನ್... ಇದೇ ಕಾರಣಕ್ಕೆ ಇದೋ ಬಂದಿದೆ ಪ್ರೇಮದ ನಿಖರತೆಯನ್ನು ಪತ್ತೆ ಮಾಡುವ ಯಂತ್ರ!

ದಕ್ಷಿಣ ಕೊರಿಯಾದಲ್ಲಿ ವ್ಯಾಲೆಂಟೈನ್ ಡೇ ಎಂಬುದು ಚಾಕೋಲೆಟ್, ಮೃಷ್ಟಾನ್ನ ಭೋಜನಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಅದರ ಜತೆಗೇ ಸೇರಿಕೊಂಡಿದೆ ಪ್ರೇಮಿಯ ಪ್ರೀತಿಯ ಆಳ ಕಂಡು ಹಿಡಿಯುವ ಅತ್ಯಾಧುನಿಕ ಹೈ-ಟೆಕ್ ಮೊಬೈಲ್.

ಪ್ರೇಮ ಪತ್ತೇದಾರಿ ಯಂತ್ರ ಸೇವೆಯನ್ನು ಮೊಬೈಲ್ ಸೇವಾ ಸಂಸ್ಥೆ ಕೆಟಿಎಫ್‌ ಒದಗಿಸುತ್ತಿದ್ದು, ಮಾತನಾಡುವ ಶಬ್ದ ತರಂಗಗಳನ್ನು ಆಧರಿಸಿ ಅದು ಪ್ರೀತಿಯ ಪ್ರಾಮಾಣಿಕತೆ ಮತ್ತು ಆಳವನ್ನು ಕಂಡುಹಿಡಿಯುತ್ತದೆ.

ಇತ್ತೀಚೆಗೆ ಪ್ರೇಮಿಗಳು ಪರಸ್ಪರರ ಪ್ರೇಮದ ಆಳ ತಿಳಿದೇ ಮುಂದಡಿಯಿಡಲು ತೀರ್ಮಾನಿಸುತ್ತಿರುವುದೇ ಈ ಸೇವೆಯನ್ನು ಆರಂಭಿಸಲು ಪ್ರೇರಣೆ ಎಂದು ಕೆಟಿಎಫ್ ಸಂಸ್ಥೆಯ ಆಹ್ನ್ ಹೀ-ಜುಂಗ್ ತಿಳಿಸಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರೇಮಿಯೊಂದಿಗೆ ಮಾತನಾಡುವಾಗ ಹ್ಯಾಂಡ್‌ಸೆಟ್‌ನಲ್ಲಿರುವ ಪರದೆ ಮೇಲೆ ಲವ್‌ ಮೀಟರ್ ಬಾರ್ ಮೂಡುತ್ತದೆ. ಶಬ್ದದ ತರಂಗಗಳಿಗೆ ಅನುಸಾರವಾಗಿ ಏರಿಳಿತವನ್ನು ತೋರಿಸುತ್ತದೆ ಮತ್ತು ಇದರಿಂದಾಗಿ ಪ್ರಾಮಾಣಿಕತೆ ಲೆಕ್ಕ ಹಾಕಬಹುದು ಎನ್ನುತ್ತಾರೆ ಮೊಬೈಲ್ ಸೇವಾ ಪೂರೈಕೆದಾರರು.

ಪ್ರೇಮಿಗಳ ಸಂಭಾಷಣೆ ಮುಗಿದ ನಂತರ ಡಯಲ್ ಮಾಡಿದ ಸಂಖ್ಯೆಗಳಿಗೆ ಪ್ರೇಮದ ತೀವ್ರತೆ, ಪ್ರಾಮಾಣಿಕತೆ, ವಿಶ್ವಾಸದ ಕುರಿತ ಪಠ್ಯ ಸಂದೇಶವೊಂದು ರವಾನೆಯಾಗುತ್ತದೆ. ಇದರಿಂದ ತಮ್ಮಿಬ್ಬರ ಪ್ರೇಮದ ಪರಿಧಿಯನ್ನು ಪ್ರೇಮಿಗಳು ನಿರ್ಣಯಿಸಿಕೊಳ್ಳಬಹುದು. ಕೆಟಿಎಫ್‌ ಕಂಪೆನಿ ಈ ಗ್ರಾಹಕ ಸೇವೆಗೆ ನಿಗದಿಪಡಿಸುವ ದರ ಮಾಸಿಕ 1.59 ಡಾಲರ್. ಅಥವಾ ಪ್ರತಿ ಕಾಲ್‌ಗೆ 300 ವನ್ (ದಕ್ಷಿಣ ಕೊರಿಯಾದ ಕರೆನ್ಸಿ).

ಕರೆ ಮಾಡುವವರು ಪ್ರೇಮಿಯ ಪ್ರೀತಿಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲು ಸೇವಾಶುಲ್ಕವನ್ನು ನೀಡಲು ಹಿಂದೆ ಮುಂದೆ ನೋಡಲಾರರು ಎಂದು ಕಂಪೆನಿ ವಿಶ್ವಾಸ ವ್ಯಕ್ತಪಡಿಸಿದೆ.

ಹಾಗಾಗಿ ಮೋಜಿಗೆ, ಮೇಜವಾನಿಗೆ ಪ್ರೇಮ ಯಾಚನೆ ಮಾಡುವವರೇ... ಮುಂದುವರಿಯುವ ಮುನ್ನ ಜಾಗ್ರತೆ ವಹಿಸಿ!

ವೆಬ್ದುನಿಯಾವನ್ನು ಓದಿ