ಸ್ವರ್ಣಗೌರಿ ವ್ರತದ ಆಚರಣೆಯ ಹಿಂದಿದೆ ಬಲವಾದ ನಂಬಿಕೆ

ಗುರುವಾರ, 9 ಸೆಪ್ಟಂಬರ್ 2021 (10:32 IST)
Gowri Habba Today : ಹಬ್ಬಗಳೆಂದರೆ ಅದೇನೋ ಒಂದು ಸಡಗರ, ಸಂಭ್ರಮ ಇದ್ದೇ ಇರುತ್ತೆ ಅಲ್ವ. ಬಹುತೇಕ ಎಲ್ಲ ಹಬ್ಬಗಳಿಗೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಆದರೂ, ಗೌರಿ - ಗಣೇಶ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಂಭ್ರಮ ಹೆಚ್ಚಾಗೇ ಇರುತ್ತದೆ. ಗೌರಿ - ಗಣೇಶನ ಮೂರ್ತಿ ತರುವುದು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ತರುವುದು, ಗೌರಿ - ಗಣೇಶನಿಗೆ ನೈವೇದ್ಯ ಮಾಡಲು ಸಿಹಿ ತಿಂಡಿಗಳು, ಪೂಜೆ ಮಾಡುವುದು ಹಾಗೂ ಬೇರೆಯವರ ಮನೆಗೆ ಹೋಗಿ ಗೌರಿ - ಗಣೇಶನ ಮೂರ್ತಿ ನೋಡುವುದು ಹಾಗೂ ಆಶೀರ್ವಾದ ತೆಗೆದುಕೊಳ್ಳುವುದೂ ಒಂದು ಸಂಭ್ರಮವೇ.

ಗಣೇಶ ಅಂದ್ರೆ ಮಕ್ಕಳಿಗಂತೂ ಸ್ವಲ್ಪ ಜಾಸ್ತಿನೇ ಇಷ್ಟ ಇರುತ್ತೆ. ಅದೇ, ಗಣೇಶನ ಹಬ್ಬದ ಹಿಂದಿನ ದಿನ ಬರುವುದು ಗೌರಿ ಹಬ್ಬ. ಗೌರಿ ಹಬ್ಬವು ಗೌರಿ ದೇವಿಗೆ ಅರ್ಪಿಸಿದ ಹಬ್ಬವಾಗಿದೆ. ಗೌರಿ ಶಿವನ ಸಂಗಾತಿ, ಪಾರ್ವತಿ ಎಂದೇ ಪ್ರಸಿದ್ಧವಾಗಿ ಕರೆಯುತ್ತಾರೆ. ಈ ಗೌರಿ ಹಬ್ಬವನ್ನು ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಭಾಗಗಳ ಮಹಿಳೆಯರು ಆಚರಿಸುತ್ತಾರೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯ ಒಂದು ದಿನ ಮೊದಲು ದೇವಿಯ ಪೂಜೆ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತ ಎಂದೂ ಕರೆಯಲಾಗುತ್ತದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ತದಿಗೆ/ತೃತೀಯ ತಿಥಿ (ಮೂರನೇ ದಿನ), ಶುಕ್ಲ ಪಕ್ಷ (ಚಂದ್ರನ ಕಾಲಮಾನದ ಪ್ರಕಾರ ಪ್ರಕಾಶಮಾನವಾದ ಹಂತ) ದಂದು ಭಾದ್ರಪದ ತಿಂಗಳಲ್ಲಿ ಆಚರಿಸುತ್ತಾರೆ.
ಇನ್ನು, ಗೌರಿ ಹಬ್ಬ ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ಮಹಿಳೆಯರು ಆಚರಿಸುವ ಹರತಾಲಿಕ ತೀಜ್ ವ್ರತವನ್ನು ಹೋಲುತ್ತದೆ. ಇಂದು, ಗೌರಿ ಹಬ್ಬದ ಆಚರಣೆಗಳು ಆರಂಭವಾಗುತ್ತಿದ್ದು, ಹಬ್ಬದ ಪೂಜೆಯ ಸಮಯ ಮತ್ತು ಮಹತ್ವವನ್ನು ಇಲ್ಲಿ ಪರಿಶೀಲಿಸಿ.
ಗೌರಿ ಹಬ್ಬ 2021 ದಿನಾಂಕ
ಈ ವರ್ಷ ಗೌರಿ ಹಬ್ಬವನ್ನು ಸೆಪ್ಟೆಂಬರ್ 9 ರಂದು ಆಚರಿಸಲಾಗುತ್ತದೆ.
ಗೌರಿ ಹಬ್ಬ 2021 ತಿಥಿ ಸಮಯ
ತಿಥಿಯನ್ನು ತದಿಗೆ ಎಂದೂ ಕರೆಯುತ್ತಾರೆ. ಇದು ಸೆಪ್ಟೆಂಬರ್ 9 ರಂದು 2:33 AMಗೆ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 10 ರಂದು 12:18 AMಗೆ ಕೊನೆಗೊಳ್ಳುತ್ತದೆ.
ಗೌರಿ ಹಬ್ಬ 2021 ಪೂಜೆಯ ಸಮಯ
ಹಬ್ಬದ ಪೂಜೆಯನ್ನು ಬೆಳಗ್ಗೆ ಅಥವಾ ಸಂಜೆ ಮಾಡಬಹುದು.
ಪ್ರಾತಃ ಕಾಲ ಪೂಜೆ ಮಹೂರ್ತ - 6:03 AMನಿಂದ 8:33 AM
ಪ್ರದೋಷ ಕಾಲ ಪೂಜೆ ಮುಹೂರ್ತ - 6:33 PM ನಿಂದ 08:51 PM
ಗೌರಿ ಹಬ್ಬದ ಮಹತ್ವ
ಗೌರಿ ದೇವಿಯು ತನ್ನ ತಾಯಿಯ ಮನೆಗೆ ತದಿಗೆಯಂದು ಭೇಟಿ ನೀಡುತ್ತಾರೆ ಮತ್ತು ಮರುದಿನ ಕೈಲಾಸಕ್ಕೆ ಮರಳುತ್ತಾರೆ ಎಂಬುದು ನಂಬಿಕೆ.
ಗೌರಿ ಹಬ್ಬದಂದು, ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಉಪವಾಸ ವ್ರತ ಮಾಡುತ್ತಾರೆ ಮತ್ತು ಸುಖಮಯ ದಾಂಪತ್ಯ ಜೀವನಕ್ಕಾಗಿ ಸ್ವರ್ಣಗೌರಿಯ ಆಶೀರ್ವಾದ ಪಡೆಯಲು ಗೌರಿ ದೇವಿಯನ್ನು ಪೂಜಿಸುತ್ತಾರೆ. ಇನ್ನು, ಅವಿವಾಹಿತ ಮಹಿಳೆಯರು ಸಹ ತಮ್ಮ ಆಯ್ಕೆಯ ಜೀವನ ಸಂಗಾತಿಗಾಗಿ ಹಾರೈಸಲು ಹಲವರು ಉಪವಾಸ ಮಾಡುತ್ತಾರೆ. ವಿವಾಹಿತ ಮಹಿಳೆಯರು ಗೌರಿ ದಾರ ಅಥವಾ ಗೌರಿ ಎಳೆ ಎಂಬ ಪವಿತ್ರ ದಾರವನ್ನು ತಮ್ಮ ಬಲ ಮಣಿಕಟ್ಟಿಗೆ 16 ಗಂಟುಗಳನ್ನು ಕಟ್ಟಿಕೊಳ್ಳುತ್ತಾರೆ ಹಾಗೂ ಅವಿವಾಹಿತ ಹುಡುಗಿಯರು ಅದನ್ನು ಗಂಟುಗಳಿಲ್ಲದೆ ದಾರವನ್ನು ಕಟ್ಟಿಕೊಳ್ಳುತ್ತಾರೆ.
ಇನ್ನ, ಹಬ್ಬ ಅಂದ್ರೆ ಅಲಂಕಾರಕ್ಕೆ ಕೊರತೆ ಇರುತ್ತಾ..? ಮಹಿಳೆಯರು ತಮ್ಮ ಅತ್ಯುತ್ತಮ ಅಲಂಕಾರವನ್ನು ಧರಿಸುತ್ತಾರೆ ಮತ್ತು ಅವರ ಪೋಷಕರು ಕಳಿಸಿದ ವಸ್ತುಗಳೊಂದಿಗೆ ಪೂಜೆ ಮಾಡುತ್ತಾರೆ. ಮದುವೆಯಾದ ಮಹಿಳೆಯರು ಸಿಂಧೂರ, ಅರಿಶಿಣ, ಕುಂಕುಮ, ಹೂವುಗಳು, ಬಳೆಗಳು, ಬಾಚಣಿಗೆ, ಕನ್ನಡಿ ಇತ್ಯಾದಿ ವಸ್ತುಗಳನ್ನು ಹಾಗೂ ಹಣ್ಣುಗಳು, ಪಾನ್, ಇಡೀ ತೆಂಗಿನಕಾಯಿ ಮತ್ತು ದಕ್ಷಿಣೆಯನ್ನು ಮರದಲ್ಲಿಟ್ಟು ಸ್ವರ್ಣಗೌರಿ ದೇವಿಗೆ ಬಾಗಿನ ನೀಡುತ್ತಾರೆ. ಹಾಗೂ ಹಲವು ಮಹಿಳೆಯರು 16 ಸುಮಂಗಲಿಯರಿಗೆ (ವಿವಾಹಿತ ಮಹಿಳೆಯರು) ಬಾಗಿನ ನೀಡುತ್ತಾರೆ. ಇದನ್ನು ಮಂಗಳಕರ ಸೂಚಕ ಎಂದು ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ