ಹೊಸವರ್ಷದ ಸಂಕಲ್ಪಗಳು ಆರೋಗ್ಯಕ್ಕೆ ಮಾರಕ

ಹೊಸವರ್ಷಾರಂಭದ ವೇಳೆಗೆ ರೆಸೊಲ್ಯೂಶನ್‌ಗಳ ಗೊಡವೆಗೆ ಹೋಗದೆ ಮುಂದುವರಿಯುವವರಿಗೆ ಕೊಂಚ ಸಂತಸ ನೀಡುವ ಮತ್ತು ರೆಸೊಲ್ಯೂಶನ್‌ಗಳನ್ನು ಕೈಗೊಳ್ಳುವವರಿಗೆ ಒಂದಿಷ್ಟು ನಿರಾಸೆ ಮೂಡಿಸುವ ಸುದ್ದಿ ಇದು. ಅದೇನಪಾ ಅಂದರೆ, ಇಂತಹ ಈ ನಿರ್ಧಾರಗಳು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸುದ್ದಿ ಇದೆ.

ಬ್ರಿಟನ್ನಿನ ಮಾನಸಿಕ ಆರೋಗ್ಯ ದತ್ತಿ ಸಂಸ್ಥೆಯೊಂದು ಇಂತಹ ಸಂಕಲ್ಪಗಳಿಗೆ ಅಂಟಿಕೊಳ್ಳದಂತೆ ಜನತೆಯನ್ನು ಒತ್ತಾಯಿಸಿದೆ.

ತೂಕ ಇಳಿಸಿಕೊಳ್ಳುವುದು ಇವೇ ಮುಂತಾದ ದೈಹಿಕ ಪರಿಪೂರ್ಣತೆಯಂತಹ ನಿರ್ಧಾರಗಳು ವ್ಯಕ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ನಿರಾಶಾವಾದವನ್ನು ಹೆಚ್ಚಿಸಬಹುದು, ಖಿನ್ನತೆಗೆ ಜಾರಿಸಬಹುದು ಮತ್ತು ಸ್ವಾಭಿಮಾನದ ಮೇಲೆ ಧಕ್ಕೆಯುಂಟು ಮಾಡುವ ಅಪಾಯವಿದೆ ಎಂದು ಈ ದತ್ತಿ ಸಂಸ್ಥೆ ಹೇಳುತ್ತದೆ.

ಆಶಾವಾದಿ ನಿರ್ಧಾರಗಳನ್ನು ಕೈಗೊಂಡವರು ಅದನ್ನು ಪೂರೈಸಲಾಗದಿದ್ದಲ್ಲಿ, ವೈಫಲ್ಯ ಹಾಗೂ ಅಸಮರ್ಪಕತೆಯ ಭಾವನೆಗಳನ್ನು ಹೊಂದುವ ಸಾಧ್ಯತೆ ಇದೆಯಂತೆ.

ಇಂತಹ ಈ ನಿರ್ಧಾರಗಳು ನಮ್ಮಲ್ಲಿನ ಸಮಸ್ಯೆಗಳಿಂದ ಮತ್ತು ಬೊಜ್ಜು, ಅಸಂತೋಷ, ನಮ್ಮ ಉದ್ಯೋಗ ಇಲ್ಲವೇ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲಾಗುವುದಿಲ್ಲ ಎಂಬ ಪಶ್ಚಾತ್ತಾಪಗಳಿಂದ ಬಳಲುತ್ತಿದ್ದರೆ, ಇದು ವರ್ಷಂಪೂರ್ತಿ ಅಭದ್ರತೆಯನ್ನು ಉಂಟುಮಾಡಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

"ನಾವು ನಮ್ಮಲ್ಲಿನ ಕೊರತೆಗಳನ್ನು ಭರಿಸುವ ನಿಟ್ಟಿನಿಂದ ಅವಾಸ್ತವವಾದ ಗುರಿಗಳನ್ನು ಹಮ್ಮಿಕೊಂಡು ನಮ್ಮ ವರ್ತನೆಯನ್ನು ಬದಲಿಸಲು ಯತ್ನಿಸುತ್ತೇವೆ. ಹಾಗಾಗಿ ನಮ್ಮ ನಿರ್ಧಾರಗಳನ್ನು ಭರಿಸಲು ವಿಫಲವಾದಾಗ ಈ ನಿರ್ಧಾರ ಕೈಗೊಂಡ ವೇಳೆಗಿಂತ ಹೆಚ್ಚಿನ ವಿಪರೀತ ಭಾವನೆಗೊಳಗಾಗುತ್ತೇವೆ ಮತ್ತು ಇದು ನಮ್ಮ ಆರೋಗ್ಯದ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಬೀರುತ್ತದೆ" ಎಂಬುದು ಸಂಸ್ಥೆಯ ಅಭಿಪ್ರಾಯ.

"2009ರಲ್ಲಿ ಹೊಸ ವರ್ಷದ ಸಂಕಲ್ಪಗಳನ್ನು ಕೈಗೊಳ್ಳುವ ಬದಲಿಗೆ, ವರ್ಷದ ಕುರಿತು ಮತ್ತು ನೀವೇನನ್ನು ಸಾಧಿಸಬಹುದು ಎಂಬ ಕುರಿತು ಸಕಾರಾತ್ಮಕ ಚಿಂತನೆ ಮಾಡಿ" ಎಂಬುದಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೌಲ್ ಫಾರ್ಮರ್ ಹೇಳಿರುವುದನ್ನು ದಿ ಡೈಲಿ ಟೆಲಿಗ್ರಾಫ್ ಉಲ್ಲೇಖಿಸಿದೆ.

ಮುರಿದ ಸಂಕಲ್ಪಕ್ಕಾಗಿ ಮರುಗುವ ಬದಲಿಗೆ ಹೊಸ ವರ್ಷದಲ್ಲಿ ಈ ಕ್ರಮಗಳನ್ನು ಕೈಗೊಂಡು ನೋಡಿರೆಂದು ಸಂಸ್ಥೆ ಸಲಹೆ ಮಾಡಿದೆ.

ಚಟುವಟಿಕೆಯಿಂದಿರಿ
ವ್ಯಾಯಾಮ ಮಾಡುವುದರಿಂದ ಎಂಡೋರ್ಪಿನ್‌ಗಳು ಬಿಡುಗಡೆಯಾಗುತ್ತವೆ. ಒಂದು ಸಣ್ಣ ಓಟವೂ ನಿಮ್ಮ ಮನಸ್ಸಿಗೆ ಆಹ್ಲಾದ ನೀಡಬಹುದು.

ಹಸಿರನ್ನು ಆಸ್ವಾದಿಸಿ
ಹಸಿರಿನೊಂದಿಗಿನ ಒಡನಾಟವು ನಿಮ್ಮ ಮೂಡ್ ಉತ್ತೇಜಿಸುತ್ತದೆ ಎಂಬುದನ್ನು ಪುರಾವೆಗಳು ಹೇಳುತ್ತವೆ. ಮನಸ್ಸಿಗೆ ಶಾಂತಿ ನೀಡುತ್ತದೆ.

ಹೊಸದೇನನ್ನಾದರೂ ಕಲಿಯಿರಿ
ಇದರಿಂದ ನಿಮ್ಮ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಮತ್ತು ಅದು ನಿಮ್ಮ ಸಾಮರ್ಥ್ಯದ ಕುರಿತು ನಿಮ್ಮಲ್ಲಿ ವಿಶ್ವಾಸ ಮೂಡಿಸುತ್ತದೆ.

ಮುರಿದ ಸಂಕಲ್ಪಗಳೊಂದಿಗೆ ಮರುಗುವವರು ನೀವಾಗಿದ್ದಲ್ಲಿ ಇವುಗಳನ್ನು ಪ್ರಯತ್ನಿಸಿ ನೋಡಿ. ಕಳೆದುಕೊಳ್ಳುವುದೇನಿಲ್ಲ.

ವೆಬ್ದುನಿಯಾವನ್ನು ಓದಿ