ಸಂಘಟಿತ ವ್ಯಕ್ತಿಗಳಿಗೆ ದೀರ್ಘಾಯುಷ್ಯ

ಸಂಘಟಿತ ವ್ಯಕ್ತಿಗಳು ದೀರ್ಘಾಯುಷಿಗಳಾಗುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಅಂತಾರಾಷ್ಟ್ರೀಯ ತಂಡ ಒಂದರ ಸಂಶೋಧನೆ ಪ್ರಕಾರ ಮಹತ್ವಾಕಾಂಕ್ಷಿ, ಸಂಘಟಿತ ಮತ್ತು ಆತ್ಮಪ್ರಜ್ಞೆಯುಳ್ಳವರು ಇತರ ದುಡುಕಿನ ಮಂದಿಗಿಂತ ಹೆಚ್ಚುಕಾಲ ಬಾಳುತ್ತಾರೆ.

ಆರೋಗ್ಯದ ಅಂದಾಜಿನಲ್ಲಿ ವೈದ್ಯಕೀಯ ಮತ್ತು ಸಾಮಾಜಿಕ ಅಂಶಗಳಂತೆ ಮಾನಸಿಕ ಲಕ್ಷಣಗಳೂ ಸಹ ಪ್ರಮುಖವಾದುದು ಎಂದು ಸಂಶೋಧಕರು ಹೇಳುತ್ತಾರೆ. ಆತ್ಮಸಾಕ್ಷಿಗನುಗುಣವಾಗಿ, ಎಚ್ಚರಿಕೆಯಿಂದ ನಡೆದುಕೊಳ್ಳುವಂತಹ ವ್ಯಕ್ತಿಗಳು ಇತರರಿಗಿಂತ ನಾಲ್ಕು ವರ್ಷಗಳ ಕಾಲ ಹೆಚ್ಚು ಬದುಕಬಹುದು ಎಂಬುದು ಅಧ್ಯಯನ ಹೇಳುವ ಅಂಶ.

ಅಲ್ಲದೆ ಹೆಚ್ಚು ಅಂತಸ್ಸಾಕ್ಷಿಯ ವ್ಯಕ್ತಿಗಳಲ್ಲಿ ಧೂಮಪಾನ, ಮದ್ಯಪಾನದಂತಹ ದುಶ್ಟಟಗಳು ಕಡಿಮೆಯಾಗಿದ್ದು, ಕಡಿಮೆ ಒತ್ತಡದಿಂದ ಹೆಚ್ಚು ಸ್ಥಿರವಾಗಿ ಬದುಕುತ್ತಾರೆ ಎಂದು ಅಧ್ಯಯನ ಹೇಳುತ್ತದೆ.

ಎಚ್ಚರಿಕೆ ನಡೆಯ ವ್ಯಕ್ತಿಗಳು ಉತ್ತಮ ಆರೋಗ್ಯ ಅಭ್ಯಾಸಗಳನ್ನು ಹೊಂದಿದ್ದು, ಇವರು ಹೆಚ್ಚು ಸ್ಥಿರವಾದ ಉದ್ಯೋಗ ಮತ್ತು ವೈವಾಹಿಕ ಸಂಬಂಧಗಳನ್ನೂ ಹೊಂದಿರುತ್ತಾರೆ ಎಂದು ಸಂಶೋಧಕ ಪ್ರೊಫೆಸರ್ ಹಾರ್ವರ್ಡ್ ಫ್ರೈಡ್‌ಮನ್ ಹೇಳುತ್ತಾರೆ. ಅಧ್ಯಯನಕ್ಕಾಗಿ ಅಮೆರಿಕ, ಕೆನಡ, ಜಪಾನ್ ಜರ್ಮನಿ, ನಾರ್ವೆ ಹಾಗೂ ಸ್ವೀಡನ್‌ನ 8,900 ಮಂದಿಯನ್ನು ಆಯ್ದುಕೊಳ್ಳಲಾಗಿದ್ದು, ಸ್ವಯಂ ನಿಯಂತ್ರಣ, ಸಂಘಟನೆ ಮತ್ತು ಪರಿಶ್ರಮ ಅಂಶಗಳನ್ನು ಸಂಶೋಧಕರು ಪರಿಗಣಿಸಿದ್ದರು.

ಸಂಘಟನೆ ಮತ್ತು ಪರಿಶ್ರಮ ಹಾಗೂ ದೀರ್ಘಾಯುಷ್ಯಕ್ಕೆ ನಿಕಟ ಸಂಬಂಧವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸ್ಥಿರವಾದ ಉದ್ಯೋಗ ಮತ್ತು ಉತ್ತಮ ವೈವಾಹಿಕ ಸಂಬಂಧಗಳನ್ನು ಹೊಂದಿರುವವರು ಹೆಚ್ಚು ಆತ್ಮಪ್ರಜ್ಞೆಯ ಮತ್ತು ಎಚ್ಚರಿಕೆ ನಡೆಯನ್ನು ಹೊಂದಿರುತ್ತಾರೆ ಎಂಬುದಕ್ಕೆ ಅಧ್ಯಯನ ಪುರಾವೆಯನ್ನು ಒದಗಿಸಿದೆ. ತಮ್ಮ ಜೀವನವಿಧಾನ ಹಾಗೂ ಚಟುವಟಿಕೆಗಳು ಆಯುಷ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬ ಸವಾಲಿ ಅಂಶವನ್ನು ಅಧ್ಯಯನ ಪತ್ತೆ ಮಾಡಿದೆ.

ಆತ್ಮಸಾಕ್ಷಿ ಅಥವಾ ಎಚ್ಚರಿಕೆ ನಡೆಯನ್ನು ಕ್ಷಿಪ್ರ ಅವಧಿಗೆ ಮೈಗೂಡಿಸಿಕೊಳ್ಳಲಾಗದು. ವ್ಯಕ್ತಿಗಳು ಜವಾಬ್ದಾರಿಯುತ ಸಂಬಂಧಗಳು, ಉದ್ಯೋಗ ಅಥವಾ ಸಂಘವನ್ನು ಹೊಂದಿದಾಗ ಇಂತಹ ಮನೋಭಾವ ವೃದ್ಧಿಗೊಳ್ಳುತ್ತದೆ ಎಂದು ಸಹ ಸಂಶೋಧಕ ಮಾರ್ಗರೆಟ್ ಕರ್ನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ