ಶೀತ, ನೆಗಡಿ ವಿಟಮಿನ್ ಡಿಯಿಂದ ಪರಿಹಾರ: ವೈದ್ಯಕೀಯ ಸಮೀಕ್ಷೆ

`ವಿಟಮಿನ್ ಡಿ' ಕೊರತೆಯಿಂದ ಸಾಮಾನ್ಯ ಶೀತ, ನೆಗಡಿ ಹಾಗೂ ಫ್ಲೂ ಜ್ವರ ಬರುವ ಸಾಧ್ಯತೆಗಳು ಹೆಚ್ಚು ಎಂಬ ಹೊಸ ಸಂಶೋಧನೆ ಈಗ ವೈದ್ಯವಿಜ್ಞಾನ ವಲಯದಲ್ಲಿ ಬೆಳಕಿಗೆ ಬಂದಿದೆ. ಅಮೆರಿಕದ ಕೊಲರೆಡೋ ಡೆನ್ವರ್ ವಿಶ್ವವಿದ್ಯಾನಿಲಯ, ಎಂ.ಜಿ.ಆಸ್ಪತ್ರೆ ಹಾಗೂ ಬೋಸ್ಟನ್ ಮಕ್ಕಳ ಆಸ್ಪತ್ರೆ ನಡೆಸಿದ ಸಮೀಕ್ಷೆಯಲ್ಲಿ ಈ ಹೊಸ ಫಲಿತಾಂಶ ಲಭ್ಯವಾಗಿದೆ.

'ವಿಟಮಿನ್ ಡಿ'ಗೆ ಶ್ವಾಸಕೋಶದ ಸೋಂಕಿನಿಂದ ಬರುವ ಕಾಯಿಲೆಗಳ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಹೀಗಾಗಿ ಸಾಮಾನ್ಯ ಶೀತ, ನೆಗಡಿಯ ರೋಗಾಣುಗಳ ಜತೆ 'ವಿಟಮಿನ್ ಡಿ' ಹೋರಾಡುತ್ತದೆ. ಈ ವಿಟಮಿನ್ ಪ್ರಮಾಣ ದೇಹದಲ್ಲಿ ಕಡಿಮೆಯಾಗುತ್ತಾ ಹೋದಂತೆ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗೂ ಸುಲಭವಾಗಿ ಶೀತ, ನೆಗಡಿ, ಫ್ಲೂ ರೋಗಾಣುಗಳ ದಾಳಿಗೆ ತುತ್ತಾಗಬೇಕಾಗುತ್ತದೆ ಎನ್ನುತ್ತದೆ ಸಮೀಕ್ಷೆ. ಈ ಸಮೀಕ್ಷೆಯಲ್ಲಿ 'ವಿಟಮಿನ್ ಡಿ' ಪ್ರಮಾಣ ಕಡಿಮೆಯಿರುವ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರು ಹೆಚ್ಚು ಬಾರಿ ಆಗಾಗ ಶೀತ, ನೆಗಡಿ, ಫ್ಲೂಗೆ ತುತ್ತಾಗುತ್ತಿದ್ದರು ಎಂಬುದು ಪತ್ತೆಯಾಗಿದೆ. ಇದಲ್ಲದೆ, ಶ್ವಾಸಕೋಶದ ಸೋಂಕಿನಿಂದ ಬರುವ ಅಸ್ತಮಾ ಮೊದಲಾದ ಕಾಯಿಲೆಗಳಿಗೆ ತುತ್ತಾಗುವ ಸಂಭವವೂ ಹೆಚ್ಚು ಎನ್ನುತ್ತದೆ ಸಮೀಕ್ಷೆ.
PTI

ಈ ಸಮೀಕ್ಷೆಯ ಮುಖಂಡತ್ವ ವಹಿಸಿದ ಅದಿತ್ ಜಿಂದೆ ಹೇಳುವಂತೆ, ಕೇವಲ ಸಾಮಾನ್ಯ ಶೀತ, ನೆಗಡಿಯಷ್ಟೇ ಅಲ್ಲ. ಶ್ವಾಸಕೋಶದ ಸೋಂಕಿನ ತೀವ್ರತರ ಕಾಯಿಲೆಗಳಾದ ಅಸ್ತಮಾದಂತವುಗಳ ನಿಗ್ರಹಕ್ಕೂ 'ವಿಟಮಿನ್ ಡಿ'ಯ ಹೆಚ್ಚಿನ ಸೇವನೆಯೂ ಪರಿಹಾರವಾಗುತ್ತದೆ. ಹಿಂದಿನಿಂದಲೂ 'ವಿಟಮಿನ್ ಸಿ' ಪ್ರಮಾಣದ ಹೆಚ್ಚಿನ ಬಳಕೆಯಿಂದ ಶೀತ, ನೆಗಡಿಯನ್ನು ನಿಗ್ರಹಿಸಬಹುದು ಎಂದು ಹೇಳಲಾಗುತ್ತಿದೆ. ಈಗಲೂ ಇದನ್ನೇ ಅನುಸರಿಸಲಾಗುತ್ತದೆ. ಆದರೆ ಅದಕ್ಕಿಂತಲೂ 'ಡಿ ವಿಟಮಿನ್' ಬಳಕೆಯಿಂದ ಈ ರೋಗಗಳ ನಿಗ್ರಹ ಶಕ್ತಿ ಅಧಿಕ. 'ವಿಟಮಿನ್ ಡಿ' ಪ್ರಮಾಣದ ಹೆಚ್ಚಿನ ಬಳಕೆಯಿಂದ ಎಲುಬು ಗಟ್ಟಿಯಾಗುವುದಲ್ಲದೆ, ದೇಹದಲ್ಲಿರುವ ರೋಗನಿರೋಧಕ ಶಕ್ತಿಯೂ ವರ್ಧಿಸುತ್ತದೆ ಎನ್ನುತ್ತದೆ ಸಮೀಕ್ಷೆ.

ಸೂರ್ಯನ ಬೆಳಕಿನಿಂದ ದೇಹಕ್ಕೆ ಸಿಗುವ 'ವಿಟಮಿನ್ ಡಿ'ಯ ಪ್ರಮಾಣ ಹೆಚ್ಚು. ಚಳಿ ಹಾಗೂ ಮಳೆಗಾಲದ ಸಮಯದಲ್ಲಿ ದೇಹಕ್ಕೆ ಸಾಕಷ್ಟು 'ವಿಟಮಿನ್ ಡಿ' ಸೂರ್ಯನ ಬೆಳಕಿನಿಂದ ಸಿಗದೇ ಇರುವುದರಿಂದಲೇ ಆ ಸಮಯದಲ್ಲಿ ಹೆಚ್ಚು ಶೀತ, ನೆಗಡಿಗೆ ತುತ್ತಾಗುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಅಮೆರಿಕದ ಸುಮಾರು 19,000 ಮಂದಿಯ ರಕ್ತದ ಸ್ಯಾಂಪಲ್ ಪಡೆಯುವ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಚಳಿ, ಮಳೆ ಹಾಗೂ ಬೇಸಿಗೆಗಾಲದಲ್ಲಿ ಪ್ರತ್ಯೇಕವಾಗಿ ಈ ಸಮೀಕ್ಷೆ ನಡೆಸಲಾಗಿದೆ.

ಒಂದು ಮಿಲಿಲೀಟರ್ ರಕ್ತದಲ್ಲಿ 10 ನ್ಯಾನೋಗ್ರಾಂಗೂ ಕಡಿಮೆ ವಿಟಮಿನ್ ಡಿ ಹೊಂದಿದವರಿಗೆ ಉಳಿದವರಿಗಿಂತ ಶೀತ, ನೆಗಡಿ ಹಾಗೂ ಉಳಿದ ಶ್ವಾಸಕೋಶದ ಸೋಂಕಿನ ತೊಂದರೆಗಳು ಬರುವ ಸಂಭವ ಶೇ.40ಕ್ಕೂ ಹೆಚ್ಚು. ಅಲ್ಲದೆ, ತೀವ್ರತರದ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿದವರು ಹಾಗೂ ಅಸ್ತಮಾ ರೋಗಿಗಳಲ್ಲಿ 'ವಿಟಮಿನ್ ಡಿ' ಇರುವುದರಿಂದ ಐದು ಪಟ್ಟು ಹೆಚ್ಚು ಬಾರಿ ಆಗಾಗ ಸೋಂಕಿಗೆ ಒಳಗಾಗಿದ್ದಾರೆ ಎಂದೂ ಸಮೀಕ್ಷೆ ಬಹಿರಂಗಪಡಿಸಿದೆ.

ಈ ಸಮೀಕ್ಷೆಗೆ ವೈದ್ಯಕೀಯ ಪ್ರಯೋಗದ ಅಗತ್ಯವೂ ಇದ್ದು, ಇದರ ನಂತರವಷ್ಟೆ 'ವಿಟಮಿನ್ ಡಿ' ಶೀತ, ನೆಗಡಿಯನ್ನು ನಿಗ್ರಹಿಸುತ್ತದೆ ಎಂದು ದೃಢೀಕರಿಸಿ ಹೇಳಬಹುದು ಎಂದು ಜಿಂದೆ ಹೇಳಿದ್ದಾರೆ. ಸದ್ಯದಲ್ಲೇ ಅಸ್ತಮಾ, ತೀವ್ರತರದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಹೆಚ್ಚಾಗಿ ಶೀತ ನೆಗಡಿಗೆ ತುತ್ತಾಗುತ್ತಿರುವವರಿಗೆ 'ವಿಟಮಿನ್ ಡಿ' ಹೆಚ್ಚು ನೀಡುವ ಮುಖಾಂತರ ಸಮೀಕ್ಷೆ ಸತ್ಯವೇ ಎಂದು ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ.