ಒತ್ತಡದಿಂದ ಕೂದ್ಲುಬಿಳಿ, ಆದ್ರೆ ಕ್ಯಾನ್ಸರ್ ತಡೆ!

ಒತ್ತಡದಿಂದ ಕೂದಲು ಬಿಳಿಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಚಿಂತೆ ಮಾಡಬೇಡ ತಲೆಕೂದ್ಲು ಬಿಳಿಯಾಗುತ್ತೆ ಎಂಬುದಾಗಿ ನಮ್ಮ ಆಪ್ತರೂ ನೀಡುತ್ತಿದ್ದ ಸಲಹೆ ಇದೀಗ ವೈಜ್ಞಾನಿಕವಾಗಿ ಸ್ಪಷ್ಟಗೊಂಡಿದೆ. ಒತ್ತಡದಿಂದ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತದೆ ಎಂದು ಅಧ್ಯಯನ ಹೇಳಿದೆ.

ಹೆಚ್ಚಿನ ಒತ್ತಡದಿಂದಾಗಿ ತಲೆಕೂದಲ ಬಣ್ಣವನ್ನು ಬದಲಿಸುವ ಸ್ಟೆಮ್‌ಸೆಲ್ ಅನ್ನು ಹಾನಿಗೊಳಿಸುವ ಕಾರಣ ತಲೆಕೂದಲು ಬೆಳ್ಳಿಯ ಬಣ್ಣಕ್ಕೆ ತಿರುಗುತ್ತದೆ ಎಂಬುದಾಗಿ ಜಪಾನಿನ ಕನಜಾವ ವಿಶ್ವವಿದ್ಯಾನಿಲಯ ನಡೆಸಿರುವ ಅಧ್ಯಯನವು ಹೇಳಿರುವುದಾಗಿ 'ಸೆಲ್' ಪತ್ರಿಕೆ ವರದಿ ಮಾಡಿದೆ.

ಒತ್ತಡವು ಕೂದಲಿಗೆ ಬಣ್ಣ ನೀಡುವ ಮೆಲನಿನ್ ಉತ್ಪಾದನೆಯನ್ನು ಕುಂಠಿತಗೊಳಿಸುವ ಕಾರಣ ಕೂದಲು ಬಹುಬೇಗ ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಆದರೆ ಕುತೂಹಲಕಾರಿ ಅಂಶವೆಂದರೆ, ಒತ್ತಡವು ಇನ್ನೊಂದು ಅನುಕೂಲವನ್ನೂ ಹೊಂದಿದೆ. ಇದು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ.

ಇಲಿಗಳ ಮೇಲೆ ಪ್ರಯೋಗ ಮಾಡಿರುವ ವಿಜ್ಞಾನಿಗಳು, ಇಲಿಗಳ ತುಪ್ಪಳದ ಮೇಲಿನ ರೇಡಿಯೇಶನ್ ಮತ್ತು ರಾಸಾಯನಿಕಗಳ ಮೇಲಿನ ಪರಿಣಾಮವನ್ನು ವಿಶ್ಲೇಷಿಸಿದ್ದು, ಅದರ ಬಣ್ಣದಲ್ಲಿನ ಬದಲಾವಣೆ ಹಾಗೂ ಸ್ಟೆಮ್ ಸೆಲ್‌ಗಳ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದರು.

ಕೂದಲಿನ ಫೊಲಿಕ್ಲೆಸ್ ಅನ್ನು ಮೈಕ್ರೋಸ್ಕೋಪ್ ಪರೀಕ್ಷೆಗೊಳಪಡಿಸಿದ್ದರು. ಸ್ಟೆಮ್ ಸೆಲ್‌ಗಳು ಇತರ ಸೆಲ್‌ಗಳಂತೆ ಬದಲಾಗಿದ್ದು ಕೂದಲಿನ ಬಣ್ಣವನ್ನು ಬೆಳ್ಳಿಯ ಬಣ್ಣಕ್ಕೆ ತಿರುಗಿಸಿತ್ತು. ಇದೇ ಯಾಂತ್ರಿಕತೆಯು ಮಾನವರಲ್ಲೂ ಕಾಣಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೂದಲು ಬಳಿಯ ಬಣ್ಣಕ್ಕೆ ತಿರುಗುವುದು ಸುರಕ್ಷಿತ ಎಂದು ಹೇಳಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಡಾ. ಡೇವಿಡ್ ಅವರು ಈ ಯಾಂತ್ರಿಕತೆಯು ಹಾನಿಗೊಂಡ ಸ್ಟೆಮ್ ಸೆಲ್‌ಗಳನ್ನು ತೆಗೆದು ಹಾಕುತ್ತದೆ ಅನ್ನುತ್ತಾರೆ.

ಸ್ಟೆಮ್ ಸೆಲ್‌ಗಳು ಕ್ಷಿಪ್ರವಾಗಿ ವಿಕಸನಗೊಳ್ಳುವುದು ಮತ್ತು ಸ್ಟೆಮ್ ಸೆಲ್‌ಗಳ ಇತರ ಗುಂಪುಗಳಿಗಿಂತ ಭಿನ್ನತೆಯು ಕ್ಯಾನ್ಸರ್‌ ಅನ್ನು ತಡೆಗಟ್ಟುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ