ನಗುತ್ತಲೇ ನೇಣಿಗೆ ಕೊರಳೊಡ್ಡಿದನೇ ಖುದೀರಾಮ್?

ND
18ನೇ ವರ್ಷದಲ್ಲಿ ನಗು ನಗುತ್ತಲೇ ನೇಣುಗಂಬವೇರಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ಹುತಾತ್ಮ ಎಂದು ಹೆಸರು ಪಡೆದಿದ್ದ ಖುದೀರಾಮ್ ಬೋಸ್ ಅವರ ಗಲ್ಲುಶಿಕ್ಷೆಯ ಕುರಿತು ಪಶ್ಚಿಮ ಬಂಗಾಳದ ವಿದ್ವಾಂಸರು ವಿಭಿನ್ನ ವಾದವೊಂದನ್ನು ಮುಂದಿಟ್ಟಿದ್ದಾರೆ. ಅದೀಗ ಖುದೀರಾಮ್ ಬಗೆಗಿದ್ದ ಭಾವನೆಗಳನ್ನು ಬದಲಿಸುವ ಸಾಧ್ಯತೆಗಳಿವೆ ಎಂಬುದು ಇತ್ತೀಚಿನ ಸುದ್ದಿ.

ಈ ಕುರಿತು ವಿದ್ವಾಂಸರು ಸಂಶೋಧನೆ ನಿರತರಾಗಿದ್ದು, ಬೋಸ್ ಕುರಿತ ಕ್ಷಮಾದಾನ ಅರ್ಜಿಯೊಂದು ಬ್ರಿಟಿಷ್ ಸರಕಾರಕ್ಕೆ ಹೋಗಿತ್ತು ಮತ್ತು ಅದನ್ನು ಬ್ರಿಟಿಷ್ ಆಡಳಿತಗಾರರು ತಳ್ಳಿ ಹಾಕಿದ್ದರು ಎಂಬುದು ಈ ವಿದ್ವಾಂಸರಿಗೆ ದಾಖಲೆಗಳ ಆಧಾರದಲ್ಲಿ ದೊರೆತ ಸುಳಿವು.

1905ರ ಬಂಗಾಳದ ವಿಭಜನೆಯಿಂದ ಕೆರಳಿ ಕೆಂಡವಾಗಿದ್ದ ಖುದೀರಾಮ್ ಬೋಸ್, ಕೇವಲ 16ನೇ ವಯಸ್ಸಿನಲ್ಲಿ ಯುಗಾಂತರ ಎಂಬ ಕ್ರಾಂತಿಕಾರಿಗಳ ಸಮೂಹವನ್ನು ಸೇರಿಕೊಂಡಿದ್ದ. ಸ್ವಾತಂತ್ರ್ಯ ಹೋರಾಟಗಾರರನ್ನು ಮಟ್ಟ ಹಾಕುವುದಕ್ಕೆ ಕುಪ್ರಸಿದ್ಧನಾಗಿದ್ದ ಮುಜಾಫರ್‌ಪುರದ ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫರ್ಡ್‌ನನ್ನು ನಿವಾರಿಸಲೆಂದು ಆತನನ್ನು ಪ್ರಫುಲ್ಲ ಚಾಕಿ ಜೊತೆಗೆ ಮುಜಾಫರ್‌ಪುರದ ಯುರೋಪಿಯನ್ ಕ್ಲಬ್‌ನತ್ತ ಕಳುಹಿಸಿಕೊಡಲಾಗಿತ್ತು.

1908ರ ಏಪ್ರಿಲ್ 30ರಂದು ಇವರಿಬ್ಬರೂ ಕ್ಲಬ್ ಹೊರಗೆ, ಬಾಂಬ್‌ಗಳೊಂದಿಗೆ ಕಾದು ಕುಳಿತರು. ಕ್ಲಬ್‌ನಿಂದ ಜನಸಮೂಹವೊಂದು ಹೊರಬರಲಾರಂಭಿಸಿದ್ದನ್ನು ನೋಡಿದ ತಕ್ಷಣವೇ, ಅವರು ಬಾಂಬ್‌ಗಳನ್ನು ಅತ್ತ ಎಸೆದರು. ಇದರಲ್ಲಿ ಇಬ್ಬರು ಬ್ರಿಟಿಷ್ ಮಹಿಳೆಯರು ಸಾವನ್ನಪ್ಪಿದರು. ಆ ಬಳಿಕ ಚಾಕಿಯನ್ನು ಸಮಷ್ಟಿಪುರ ರೈಲು ನಿಲ್ದಾಣದಲ್ಲಿ ಬಂಧಿಸಿದಾಗ ಆತ ಬ್ರಿಟಿಷರ ಕೈಯಲ್ಲಿ ಸಾಯುವುದಕ್ಕಿಂತ, ತಾನಾಗಿಯೇ ಆತ್ಮಹತ್ಯೆಗೆ ಮೊರೆ ಹೋದ. ಆದರೆ ಖುದೀರಾಮ್‌ನನ್ನು ಮಹಿಳೆಯರ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು.

ಅದೇ ವರ್ಷದ ಆಗಸ್ಟ್ 11ರಂದು ಖುದೀರಾಮ್‌ನನ್ನು ಗಲ್ಲಿಗೇರಿಸಲಾಯಿತು. ಅಂದಿನವರೆಗೆ ಖುದೀರಾಮ್ ಕುರಿತು ನಡೆದಿದ್ದ ವಿಚಾರಣೆಗಳು ಮತ್ತು ಜೈಲಿನಲ್ಲಿ ಆತನ ಕೊನೆಯ ದಿನಗಳ ಕುರಿತ ಮಾಹಿತಿ ಇದ್ದ ದಾಖಲೆ ಪತ್ರಗಳು ಇತ್ತೀಚೆಗೆ ಗೃಹರಾಜಕೀಯ ಇಲಾಖೆ ಮತ್ತು ಗುಪ್ತಚರ ವಿಭಾಗದ ನೆರವಿನಿಂದ ಪತ್ರಾಗಾರದಲ್ಲಿ ದೊರೆತಿದ್ದವು. ಈ ದಾಖಲೆಗಳಲ್ಲಿ ಉಲ್ಲೇಖವಾಗಿರುವಂತೆ, ಮೇ 1ರಂದು ಬೋಸ್ ಅವರು ಮುಜಾಫರ್‌ಪುರ ಮ್ಯಾಜಿಸ್ಟ್ರೇಟ್ ಎದುರು ಕೊಲೆ ಆರೋಪವನ್ನು ಒಪ್ಪಿಕೊಂಡಿದ್ದರು, ಆದರೆ ಆತನನ್ನು ಆಲಿಪುರ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದಾಗ, 'ಈ ಕೃತ್ಯ ನಡೆಸಲು ಚಾಕಿ ತನ್ನ ಮನವೊಲಿಸಿದ್ದ' ಎಂಬ ಹೇಳಿಕೆ ನೀಡಿದ್ದ.

'ಆದರೆ ಬ್ರಿಟಿಷ್ ಸರಕಾರವು ಖುದೀರಾಮ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಕೇಸು ಜಡಿದಿತ್ತು. ವಿಚಾರಣೆ ಹೈಕೋರ್ಟ್‌ವರೆಗೂ ಹೋಯಿತು. ಬೋಸ್ ವಕೀಲರು ಪ್ರಬಲ ವಾದ ಮಂಡಿಸಿದರಾದರೂ, ಆತನಿಗೆ ಗಲ್ಲು ಶಿಕ್ಷೆ ಖಾಯಂ ಆಯಿತು. ಆ ಬಳಿಕ ಬೋಸ್ ವಕೀಲರು ಕ್ಷಮಾದಾನ ಅರ್ಜಿಯೊಂದನ್ನು ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದರು. ಬೋಸ್ ಅವರಿಗೆ ಕೇವಲ 18 ವರ್ಷ ಪ್ರಾಯವಾಗಿರುವುದರಿಂದ, ಆತ ಇಬ್ಬರು ಮಹಿಳೆಯರ ಸಾವಿಗೆ ಕಾರಣ ಎಂದು ಸಾಬೀತಾಗಿರುವುದರಿಂದ, ಸಂಪೂರ್ಣವಾಗಿ ಕ್ಷಮಿಸದಿದ್ದರೂ, ಸರಕಾರವು ಆತನಿಗೆ ಜೀವಿಸಲು ಅವಕಾಶ ಮಾಡಿಕೊಡಬಹುದು ಎಂದು ವಕೀಲರು ಮನವಿ ಮಾಡಿದ್ದರು' ಎಂದು ಪತ್ರಾಗಾರದ ನಿರ್ದೇಶಕ ಅತೀಶ್ ದಾಸ್‌ಗುಪ್ತಾ ತಿಳಿಸಿದ್ದಾರೆ.

ಬೋಸ್ ಅವರ ಪರವಾಗಿ ವಾದಿಸಿದ್ದು ಹೈಕೋರ್ಟ್ ಹಿರಿಯ ವಕೀಲರಾಗಿದ್ದ ನರೇಂದ್ರ ಕುಮಾರ್ ಬಸು. ಅವರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಈ ವಾದ ಮಂಡಿಸಿದ್ದರು. ಈಗ ಈ ಹೊಸ ವಾದದ ಕುರಿತು ಸಂಶೋಧನೆ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ