ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?

ವೆಂಕಟ್ ಪೊಳಲಿ
PTI
ಸ್ವತಂತ್ರದ ಆದಿಯಲ್ಲಿನ ಭಾರತ ಮತ್ತು 60 ವರ್ಷಗಳ ನಂತರದ ಈಗಿನ ಭಾರತ ನಡುವಿನ ವ್ಯತ್ಯಾಸ ಅಜಗಜಾಂತರ. ಅಂದಿನ ಭಾರತದಲ್ಲಿ ಅನಿಶ್ಚಿತತೆ, ಗೊಂದಲ, ಡೋಲಾಯಮಾನ ಎಲ್ಲವೂ ಮನೆ ಮಾಡಿತ್ತು. ಆದರೆ ಇಂದಿನ ಭಾರತದಲ್ಲಿ ಅಭಿವೃದ್ಧಿ, ನಿರೀಕ್ಷೆ, ದೃಢತೆ, ನಿಖರತೆ, ವಿಶ್ವಾಸ ಮನೆ ಮಾಡಿದೆ. ಅಂದಿನ ಭಾರತವನ್ನು ಪ್ರತಿಯೊಬ್ಬರೂ ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದ್ದರೆ, ಇಂದಿನ ಭಾರತವನ್ನು ಬೆರಗು, ಅಚ್ಚರಿಯ ದೃಷ್ಟಿಯಿಂದ ನೋಡಲಾಗುತ್ತಿದೆ. ಸ್ವತಂತ್ರದ ಆದಿಯಲ್ಲಿ ಭಾರತದ ಉಳಿವಿಕೆಯ ಬಗ್ಗೆಯೇ ಅನುಮಾನಗಳು ಸುಳಿದಾಡುತ್ತಿದ್ದವು. ಆದರೆ ಈಗಿನ ಭಾರತವನ್ನು ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ನೋಡಲಾಗುತ್ತಿದೆ. ಇದು ಭಾರತ ತನ್ನ ಸ್ವಂತ ಕಾಲಿನಲ್ಲಿ ನಿಂತ 60 ವರ್ಷಗಳಲ್ಲಿ ಸಾಧಿಸಿದ ಬೆಳವಣಿಗೆ, ಅಭಿವೃದ್ಧಿ, ಸಾಧನೆ.

ಸ್ವತಂತ್ರ ಸಿಕ್ಕ ಪ್ರಾರಂಭದಲ್ಲಿ ಭಾರತ ತನ್ನ ಮಡಿಲಲ್ಲಿ ಹಲವು ಅನಿಶ್ಚಿತತೆ, ಸಮಸ್ಯೆ, ಸವಾಲು, ಗೊಂದಲಗಳನ್ನು ತುಂಬಿಕೊಂಡಿತ್ತು. ಭಾರತದ ಎದುರು ಅಸಂಖ್ಯಾತ ಸಮಸ್ಯೆಗಳು ಜೋತು ಬಿದ್ದಿದ್ದವು. ಒಂದು ಕಡೆ ಮಿಲಿಯಗಟ್ಟಲೆ ನಿರಾಶ್ರಿತರಿಗೆ ಮನೆ ಮಠ, ಉದ್ಯೋಗ, ಭೂಮಿ ಮತ್ತು ಸೂಕ್ತ ನಾಗರಿಕತ್ವ ನೀಡುವ ಹೊಣೆ, ಮತ್ತೊಂದು ಕಡೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯಿಂದ ಕೂಡಿದ್ದ ಭೂ ಖಂಡವನ್ನು ಒಂದು ಸೂರಿನಡಿ ಅಂದರೆ ಒಂದು ರಾಷ್ಟ್ರವಾಗಿ ಒಗ್ಗೂಡಿಸುವ ಬೃಹತ್ ಸವಾಲು. ಇನ್ನೊಂದೆಡೆ ಭಾರತದಲ್ಲಿ ಬೀಡುಬಿಟ್ಟಿದ್ದ ಸುಮಾರು 500 ರಾಜಾಡಳಿತವನ್ನು ಅಖಂಡ ಭಾರತಕ್ಕೆ ಸೇರಿಸಿ ಕೊಳ್ಳುವ ಬೃಹತ್ ಕಾರ್ಯ.

ಕೆಲ ರಾಜರು ಯಾವುದೇ ತಕರಾರಿಲ್ಲದೆ ಭಾರತಕ್ಕೆ ಸೇರಿಕೊಂಡರೆ, ಮತ್ತೆ ಕೆಲ ರಾಜಾಡಳಿತಗಳು ಕೆಲ ಷರತ್ತುಗಳನ್ನು ಇಟ್ಟಿದ್ದವು. ಆದರೆ ಕೆಲ ರಾಜರು ತಮ್ಮ ರಾಜಾಡಳಿತವನ್ನು ಬಿಟ್ಟು ಕೊಡಲು ನಿರಾಕರಿಸಿದರು. ಇದರಲ್ಲಿ ಹೈದರಾಬಾದ್ ನಿಜಾಂ ಮೊದಲಿಗನಾಗಿದ್ದ. ತನ್ನ ರಾಜಾಡಳಿತದಿಂದ ಹೊರ ಬರಲು ಇಚ್ಚಿಸದ ನಿಜಾಂ ಪ್ರತ್ಯೇಕ ರಾಜ್ಯವೊಂದನ್ನು ನಿರ್ಮಿಸುವ ಹಠ ಹಿಡಿದಿದ್ದ. ಈ ಹಠಮಾರಿ ನಿಜಾಂನನ್ನು ಭಾರತಕ್ಕೆ ಸೇರಿಸಿಕೊಳ್ಳುವ ಗುರುತರ ಜವಬ್ದಾರಿ ವಲ್ಲಬಾಭಾಯ್ ಪಟೇಲ್ ಮೇಲಿತ್ತು. ಸ್ವತಂತ್ರ ಹೈದರಾಬಾದ್ ಅಖಂಡ ಭಾರತದ ಒಡಲಿನಲ್ಲಿನ ಒಂದು ಕ್ಯಾನ್ಸರ್ ಆಗಿ ಪರಿಣಮಿಸಲಿದೆ ಎಂಬುದನ್ನು ಅರಿತಿದ್ದ ಪಟೇಲ್ ಒಂದು ವರ್ಷದ ಬಳಿಕ ಹೈದರಾಬಾದ್‌ಗೆ ಸೇನೆಯನ್ನು ಕಳುಹಿಸಿ, ನಿಜಾಂ ಸ್ವತಂತ್ರ ಭಾರತಕ್ಕೆ ಸೇರುವಂತೆ ಮಾಡಿದರು.

ಭಾರತ ಎದುರಿಗಿದ್ದ ಮತ್ತೊಂದು ಬೃಹತ್ ಸವಾಲು ವಿವಿಧ ಭಾಷೆ, ಸಂಸ್ಕೃತಿ, ಜಾತಿ, ಧರ್ಮವನ್ನು ಹೊಂದಿರುವ ಜನರನ್ನು ಒಂದೇ ರಾಷ್ಟ್ರ ಎಂಬ ಸೂರಿನಡಿಗೆ ತರುವುದು. ಈ ನಿಟ್ಟಿನಲ್ಲಿ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದ್ದವು. ಕಾರಣ ಆವರೆಗೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಭೂ ಖಂಡವನ್ನು ಒಟ್ಟಾಗಿಸಿ ಒಂದು ರಾಷ್ಟ್ರವನ್ನಾಗಿ ರಚಿಸಿದ ಉದಾಹರಣೆ ಇರಲಿಲ್ಲ. ಇಂಗ್ಲೆಂಡ್ ಆಗಲಿ, ಫ್ರಾನ್ಸ್ ಆಗಲಿ, ಪೊಲೆಂಡ್ ಆಗಲಿ ಎಲ್ಲವೂ ಒಂದು ಭಾಷೆ, ಸಂಸ್ಕೃತಿ, ಜಾತಿ ಆಧಾರದಲ್ಲಿ ತಮ್ಮ ರಾಷ್ಟ್ರವನ್ನು ಕಟ್ಟಿದ್ದವು. ಆದರೆ ಭಾರತದಲ್ಲಿ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ನಾನಾ ರೀತಿಯ ಭಾಷೆ, ಸಂಸ್ಕೃತಿ, ಜಾತಿ, ಧರ್ಮಗಳ ಜನರು ನೆಲೆಸುತ್ತಾರೆ. ಇವರನ್ನು ಒಟ್ಟುಗೂಡಿಸಿ ಒಂದೇ ರಾಷ್ಟ್ರದಡಿ ತರುವುದು ಭಾರತದ ಎದುರಿಗಿನ ಅತಿ ದೊಡ್ಡ ಸವಾಲಾಗಿತ್ತು. ಆದರೆ ಭಾರತ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿತು. ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತದ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.
  ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.      

ಈ ಬೃಹತ್ ಸವಾಲುಗಳ ಯಶಸ್ವಿ ನಿಭಾವಣೆಗೆ ಭಾರತದ ಸದೃಢ ಪ್ರಜಾಪ್ರಭುತ್ವ ಪ್ರಮುಖ ಕಾರಣವಾಗಿದೆ. ಆಗಿನ ರಾಷ್ಟ್ರ ನಾಯಕರ ದೂರದೃಷ್ಟಿ, ದೇಶಾಭಿಮಾನ ಮತ್ತು ಬುದ್ಧಿವಂತಿಕೆ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಮೊದಲ ಭಾರಿಗೆ ದೇಶ ಸಾರ್ವತ್ರಿಕ ಚುನಾವಣೆಗೆ ಹೋಗುವ ವೇಳೆ ಎಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ಕಾರಣ ಅಸಂಖ್ಯಾತ ಅನಕ್ಷರಸ್ಥ, ವಿವಿಧ ಜಾತಿ ಧರ್ಮದ ಜನರನ್ನು ಹೊಂದಿರುವ ರಾಷ್ಟ್ರವೊಂದು ಚುನಾವಣೆ ನಡೆಸುವುದು ಅದೇ ಮೊದಲಾಗಿತ್ತು. ಆದರೆ ಭಾರತ ಅದನ್ನು ಯಶಸ್ವಿಯಾಗಿ ಪೂರೈಸಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಮೂಕವಿಸ್ಮಿತವನ್ನಾಗಿಸಿತು. ಭಾರತ ಈವರೆಗೆ ಒಟ್ಟು 14 ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ್ದರೆ, ಅಸಂಖ್ಯಾತ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತದ್ವಿರುದ್ಧವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತದಾರರ ಸಂಖ್ಯೆಯೂ ಪ್ರತಿ ಬಾರಿಯೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪ್ರಜಾಪ್ರಭುತ್ವ ಮೇಲಿನ ಭಾರತ ಜನರ ನಂಬಿಕೆ, ವಿಶ್ವಾಸ ಮತ್ತು ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳ ಭದ್ರ ಬುನಾದಿ.

1980ರಿಂದೀಚೆಗೆ ಸರಕಾರ ಅಳವಡಿಸಿದ ಉದ್ದಿಮೆ, ಮಾರುಕಟ್ಟೆ ಸ್ನೇಹಿ ಆರ್ಥಿಕ ನೀತಿಯ ಫಲವಾಗಿ ಭಾರತ ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಶರವೇಗದ ಬೆಳವಣಿಗೆ ಕಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತವನ್ನು ಬೆರಗಿನಿಂದ ಕಾಣುತ್ತಿವೆ. ಭಾರತ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬೆಳೆದು ಬಂದ ರೀತಿ ಅನುಕರಣೀಯ. ನಮ್ಮ ದೇಶೀಯ ಉದ್ಯಮಿಗಳು ಶ್ರೀಮಂತ ರಾಷ್ಟ್ರಗಳಲ್ಲಿನ ಬೃಹತ್ ಕಂಪೆನಿಗಳನ್ನು ಖರೀದಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಈ ಬೆಳವಣಿಗೆಗಳು ಭಾರತದಲ್ಲಿ ಸುಮಾರು 200 ದಶಲಕ್ಷ ಮಧ್ಯಮ ವರ್ಗದವರನ್ನು ಸೃಷ್ಟಿಸಿದ್ದು, ಅವರಲ್ಲಿ ವಿಶ್ವಾಸ ತುಂಬಿ ತುಳುಕುವಂತೆ ಮಾಡಿದೆ. ವಿಶ್ವ ಆರ್ಥಿಕತೆಯನ್ನು ಏರುಪೇರು ಮಾಡುವಷ್ಟರ ಮಟ್ಟಿಗೆ ಭಾರತದ ಆರ್ಥಿಕತೆ ಬೆಳೆದು ನಿಂತಿದೆ. ಈ ಹಿಂದೆ ಭಾರತದತ್ತ ಆತಂಕದ ನೋಟವನ್ನು ಹರಿಸುತ್ತಿದ್ದ ವಿದೇಶಿ ರಾಷ್ಟ್ರಗಳು ಈಗ ಧೈರ್ಯದಿಂದ, ವಿಶ್ವಾಸದಿಂದ ನೋಡುತ್ತಿವೆ.

ಇದರ ಅರ್ಥ ಭಾರತದಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ಭಾರತ ಅನೇಕ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿದೆ. ಭಾರತದಲ್ಲಿ ಇನ್ನೂ ಸುಮಾರು 300 ದಶಲಕ್ಷ ಜನರು ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ನಕ್ಸಲ್‌ವಾದ, ಭಯೋತ್ಪಾದನೆಗಳು ಅಖಂಡ ಭಾರತಕ್ಕೆ ಸವಾಲು ಒಡ್ಡುತ್ತಿವೆ. ಇದರ ಜತೆಗೆ ದೇಶದ ಭ್ರಷ್ಟ ರಾಜಕಾರಣಿಗಳು ಪ್ರಜಾಪ್ರಭುತ್ವ ಆಡಳಿತ ಯಂತ್ರದಲ್ಲಿದ್ದಕೊಂಡೇ ರಾಷ್ಟ್ರವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಆದರೂ ಭಾರತ ಮುನ್ನುಗ್ಗುತ್ತಿದೆ. ಇದಕ್ಕೆ ಕಾರಣ ಭಾರತದ ಸದೃಢ ಪ್ರಜಾಪ್ರಭುತ್ವ. ಭಾರತ ಉಳಿಯಲಿದೆಯೇ? ಎಂಬ ಪ್ರಶ್ನೆ ಇಂದು ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆಯೇ? ಎಂಬುದಾಗಿ ಪರಿವರ್ತಿತವಾಗಿದೆ.