ಮೂರ ಮಂದಿ ಶಾಣ್ಯಾರ ಕೂಡಿ...

ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತಿದೆ ಮೂರ "ಶಾಣ್ಯಾರ ಕೂಡಿ ಶ್ಯಾವಿಗಿಗಿ ಉಪ್ಪ ಹಾಕಿದ್ದರಂತ"..

ಧರ್ಮಾಂಧತೆ ಮತ್ತು ಭಾಷಾಂಧತೆ ಮತ್ತು ಬುದ್ದಿಜೀವಿಗಳನ್ನು ಮತ್ತು ಅಂತಹ ಗುಣ ಸಂಪನ್ನರನ್ನು ಒಂದು ಕಡೆ ಸೇರಿಸಿದರೆ ಏನಾಗುತ್ತದೆ ? ಎನ್ನುವುದಕ್ಕೆ ರಾಮ ಸೇತು ವಿವಾದ ಚೆಂದದ ಉದಾಹರಣೆಯಾಗಬಲ್ಲದು. ತಮಿಳುನಾಡಿನಲ್ಲಿ ಕರುಣಾನಿಧಿ, ರಾಮ ಅನ್ನೊ ವ್ಯಕ್ತಿ ಶಾಲೆ ಕಲಿತಿಲ್ಲ ಅವನಿಗೆ ಅಕ್ಷರ ಜ್ಞಾನ ಇಲ್ಲ ಎಂದು ಹೇಳಿದರೆ ಅಲ್ಲಿ ದೂರದ ಬೆಂಗಳೂರಿನಲ್ಲಿ ರಾಮ ಭಕ್ತರು ಏನೂ ಗೊತ್ತಿರದ ಸೆಲ್ವಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡ್ತಾರೆ. ಇದೇ ಅವಕಾಶ ಸಿಕ್ತು ಅಂತ ಕೆಲವರಿಂದ , ಏನೂ ಅರಿಯದ ತನ್ನ ಪಾಡಿಗೆ ಬುರ್ರ ಎಂದು ಹೋಗುವ-ಬರುವ ತಮಿಳು ನಾಡಿನ ಬಸ್ಸು (ಬಂಡಿ) ಬೆಂಕಿಗೆ ಆಹುತಿಯಾಗುತ್ತದೆ.

ರಾಮನ ವಿಚಾರದಿಂದಲೇ ಪ್ರಾರಂಭಿಸೋಣ.. ತನಗೆ ದೇವರು ಅನ್ನೊ ಕಲ್ಪನೆ ಬೇಡ ಎಂದ ಮಾತ್ರಕ್ಕೆ ಇತರರಿಗೂ ಬೇಡವೆ ? ಓಟು ಬ್ಯಾಂಕ್ ಲೆಕ್ಕಾಚಾರ ಬದಿಗಿಟ್ಟರೂ ಕರುಣಾನಿಧಿ ಹೇಳಿಕೆ ತಪ್ಪು. ದೇವರು ಬೇಡ. ಅವನ ಏಜೆಂಟರಾದ ಬ್ರಾಹ್ಮಣರೂ ಬೇಡ ಎಂದು ಹೇಳಿದ್ದ ಪೆರಿಯಾರ್ ರಾಮಸ್ವಾಮಿ ಗುಂಪಿಗೆ ಸೇರಿದ ಕರುಣಾನಿಧಿ, ತಾವೊಬ್ಬರು ಸೇರಿದರೆ ಜಗತ್ತೇ ಸೇರಿದೆ ಎಂಬಂತೆ ಯಾಕೆ ಮಾತನಾಡಬೇಕು.

ಧರ್ಮಕ್ಕೆ ಗಂಟುಬಿದ್ದವರು: ರಾಮ ಸೇತು ವಿಚಾರ ತೆಗೆದದ್ದೇ ಅವರುಗಳು. ಈಗ ಹಲ್ಲಾಗೊಲ್ಲಾ ಮಾಡುತ್ತಿದ್ದಾರೆ. ರಸ್ತೆಗಳೇ ದೇಶದ ಅಭಿವೃದ್ದಿಯ ಕನ್ನಡಿ ಎಂದು ಚೆಂದದ ಹೈವೆ ನಿರ್ಮಾಣಕ್ಕೆ ಹಸಿರು ನಿಶಾನೆ ಇತ್ತ ವಾಜಪೇಯಿ ಸಾಹೇಬರೆ ರಾಮ ಸೇತು ಬಗ್ಗೆ ಅಂದು ಮಾತನಾಡಿದ್ದು. ಈಗ ಅದನ್ನೇ ಕಾಂಗ್ರೆಸ್ ಕೈಗೆತ್ತಿಕೊಂಡರೆ ಧರ್ಮನಾಶ ಧರ್ಮನಾಶ ಶಾಂತಂ ಪಾಪಂ ಎಂದು ಬಡಬಡಿಸುತ್ತಿದ್ದಾರೆ.

ಇಷ್ಟಕ್ಕೆ ವಿಚಾರ ಮುಗಿಲಿಲ್ಲ. ಸೋನಿಯಾ ಗಾಂಧಿ ಆಶೀರ್ವಾದ ತನ್ನ ಮೇಲೆ ಸದಾ ಇರಲಿ ಎಂದು ಭಾರದ್ವಾಜ್ ನಂತಹ ಕೇಂದ್ರ ಸಚಿವರು ರಾಮನು ಇಲ್ಲ ರಾಮಾಯಣವೂ ಇಲ್ಲ ಎಂದು ರಂಪಾಟ ಮಾಡಿದರು. ಯಾವಾಗ ಎಡಪಕ್ಷ ಬಿಸಿ ಮುಟ್ಟಿಸಿತೊ.. ಸರಕಾರ ಬಿದ್ದು ರಾಮನ ವಿಚಾರದಲ್ಲಿ ಅಧಿಕಾರ ಕಳೆದುಕೊಂಡ ವಿ ಪಿ ಸಿಂಗ್ ಥರಾ ಆಗ್ಬಾರ್ದು ಎಂದು ಅಫಿಡವಿಟ್ ಹಿಂದಕ್ಕೆ ತೆಗೆದುಕೊಳ್ಳಲು ಮನ್‌ಮೋಹನ್ ಸರಕಾರ ಮುಂದಾಯಿತು. ದ್ಯಾಟ್ಸ್ ದ ಬ್ಯಾಕ್ ಟು ಪೆವಿಲಿಯನ್.

ಬೆಂಗಳೂರಿನಲ್ಲಿ ತಮಿಳುನಾಡು ಬಸ್‌ಗೆ ಬೆಂಕಿ ಹಾಕಿದವರು ಯಾರು ? ಧರ್ಮಾಂಧರಾ? ಬಾಷಾಂಧರಾ? ಕನ್ನಡಿಗರಾ. ಸಂಘ ಪರಿವಾರದವರಾ, ಅಥವಾ ರಾಮ, ರಾಮ ಸೇತು ವಿಚಾರದಲ್ಲಿ ತಲೆ ಕೆಡಿಸಿಕೊಂಡವರಾ ಗೊತ್ತಿಲ್ಲ. ಆದರೆ ಇಂಥ ಶಾಣ್ಯಾಗಳು ಸೇರಿ ಮಾಡುವ ಕಿತಾಪತಿಗೆ ನಮ್ಮಂತಹವರು ಟ್ರಾಫಿಕ್ ಜಾಮೊ,ಎಲ್ಲೆಲ್ಲೊ ಸಾಯ್ಬೇಕಾಗ್ತದೆ.

ವೆಬ್ದುನಿಯಾವನ್ನು ಓದಿ