ಇದು ರಾಜಕೀಯ ಕಣ್ರೀ

ಮಾಡಿದರೆ ರಾಜಕೀಯ ಗೌಡರ ತರಹ ಮಾಡಬೇಕು. ತಂದೆಗೆ ತಕ್ಕ ಮಗ ಈ ಕುಮಾರಸ್ವಾಮಿ. ಅಂದು ರಾಜಕೀಯದಲ್ಲಿ ಮೂಲೆಗೆ ಬಿದ್ದ ಗೌಡರನ್ನು ಹೆಗಡೆ ಎತ್ತಿದ್ದೇ ದೊಡ್ಡ ತಪ್ಪಾಯಿತು. ಅಂದು ಗೌಡರ ಮುಖ್ಯಮಂತ್ರಿ ಪದವಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಗಡೆಗೆ ಬಿದ್ದ ಧರ್ಮದೇಟುಗಳು ಇಂದಿಗೂ ಮನಸ್ಸಿನಿಂದ ದೂರವಾಗಿಲ್ಲ. ಅದು ಮಾಡಿದ್ದು ಯಾರೋ ಅನ್ನುವುದು ಇಂದು ಅಸಂಗತ.

ಅಂತಹ ವ್ಯಕ್ತಿ ಇಂದು ಯಡಿಯೂರಪ್ಪನವರಿಗೆ; ಅದೃಷ್ಟಕ್ಕೆ ಆ ಧರ್ಮದೇಟು ನೀಡಿಲ್ಲ. ನೀಡಬೇಕಾದ ಜಾಗದಲ್ಲಿ ಏನು ನೀಡಬೇಕೊ ಅದನ್ನು ನೀಡಿಯಾಗಿದೆ. ಅಧಿಕಾರಕ್ಕೆ ಹಪಹಪಿಸುತ್ತಿದ್ದವರಿಗೆ ಅಧಿಕಾರ ಅಷ್ಟು ಸುಲಭದ ತುತ್ತಲ್ಲ. ರಾಮನಾಮ ಜಪಿಸಿದರೆ ಸಾಲದು. ರಾಮನಂತೆ ಇದ್ದರೂ ಸಾಲದು. ಅದಕ್ಕೆ ಇನ್ನು ಏನೇನೊ ಆಗಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಶಹಬ್ಬಾಸ್ ಕುಮಾರಸ್ವಾಮಿ.

ರಾಜಕೀಯದಲ್ಲಿ ಆದರ್ಶ ಎನ್ನುವುದು ಕಣ್ಮರೆಯಾಗಿ ದಶಕಗಳೇ ಸಂದವು. ಎಂದು ಚರಣ್ ಸಿಂಗ್ ಇಂದಿರಾ ಗಾಂಧಿ ಬೆಂಬಲಕ್ಕೆ ಮುಗುಮ್ಮಾಗಿ ನಿಂತರೋ ಅಂದೇ ಆದರ್ಶ ಮಟಾಶ್. ಅಲ್ಲಿಂದ ಶುರುವಾಗಿದ್ದು ಬರೀ ಅವಕಾಶವಾದಿ ರಾಜಕಾರಣ. ವಿಶ್ವನಾಥ್ ಪ್ರತಾಪ್ ಸಿಂಗ್ ಬಿಜೆಪಿಯ ರಥ ಮತ್ತು ಮಂಡಲ್ ಪ್ರಭಾವದಿಂದ ಕೆಳಗಿಳಿದ ನಂತರ ಚಂದ್ರಶೇಖರ್ ರೂಪದಲ್ಲಿ ಮತ್ತೊಮ್ಮೆ ಚರಣ್ ಸಿಂಗ್ ಅವತರಿಸಿದ್ದು, ರಾಜೀವ್ ತಾಳಕ್ಕೆ ಕುಣಿಯಲಾಗದೆ, ಇದ್ದ ದೇಶದ ಚಿನ್ನವನ್ನೆಲ್ಲ ಇಂಗ್ಲೆಂಡಿನಲ್ಲಿ ಒತ್ತೆ ಇಟ್ಟಿದ್ದು ಯಂಗ್ ಟರ್ಕ್ ಚಂದ್ರಶೇಖರ್ ಸಾಧನೆ. ಅವರಿಂದ ಏನೂ ಆಗಲಿಲ್ಲ.

ವಿಷಯ ಎಲ್ಲಿಂದ ಎಲ್ಲಿಗೋ ಹೋಯಿತು. ರಾಜಕೀಯದಲ್ಲಿ ಆದರ್ಶ ತತ್ವಗಳು ಕಣ್ಮರೆಯಾದರೂ ಬದ್ಧತೆಗೆ ಎಲ್ಲಿಯೂ ಕೊರತೆಯಾಗಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ 13 ಪಕ್ಷಗಳ ಕಿಚಡಿ ಸರಕಾರದಲ್ಲಿ ಹಾಕಿಕೊಂಡ ಕಾರ್ಯಕ್ರಮಗಳಿಗೆ ಬದ್ಧತೆ ಇತ್ತು, ಆದ್ದರಿಂದಲೇ ಅದು ನಿರಾಯಾಸವಾಗಿ ಐದು ವರ್ಷಗಳನ್ನು ಪೂರೈಸಿತು. ಅದೇ ಈಗಿನ ಕಾಂಗ್ರೆಸ್ ಪಕ್ಷದ ಯುಪಿಎ ನೋಡಿ, ಎರಡು ಚಿಲ್ಲರೆ ವರ್ಷಗಳಲ್ಲಿ ತಿಪ್ಪರಲಾಗ ಹಾಕಲು ಶುರು ಮಾಡಿದೆ. ಯಾಕೆ ಬದ್ಧತೆ ಇಲ್ಲವಾ ? ಎಡಪಕ್ಷಗಳು ಮತ್ತು ಕಾಂಗ್ರೆಸ್ ಇಂದಿಗೂ ಅಣು ಒಪ್ಪಂದದ ವಿಚಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದ ರೀತಿಯಲ್ಲಿ ಮಾಡುತ್ತಿವೆ.

ಕರ್ನಾಟಕದಲ್ಲಿ "ಕರ್ನಾಟಕ ಅಭಿವೃದ್ಧಿ ರಂಗ ಪ್ರಹಸನ" ಇಂದಿಗೆ ಮುಕ್ತಾಯಗೊಂಡಿದೆ. ವಾಸ್ತವಿಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ರಂಗ ತಾಲೀಮಿಗೆ ಮಂಗಳ ಹೇಳಿತ್ತು. ದೇವೇಗೌಡರ ರೀತಿಯಲ್ಲಿ ಕುಮಾರಸ್ವಾಮಿ ಕೂಡ ಅಂತಿಮ ಹಂತದ ವರೆಗೆ "ಬದ್ಧ, ಬದ್ಧ" ಎಂದು ಹೇಳುತ್ತಲೇ, ಕೊನೆಗೆ "ಬಿಜೆಪಿ ನೀ ಬಿದ್ದೆ ಹಳ್ಳಕ್ಕೆ" ಎಂದು ಹೇಳಿಬಿಟ್ಟರು.

ಇನ್ನು ಒಂದು ಮಜಾ ಅಂದರೆ ಇಪ್ಪತ್ತು ತಿಂಗಳ ಹಿಂದೆ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಮಾತ್ರ ಅಧಿಕಾರ ಹಸ್ತಾಂತರದ ಒಪ್ಪಂದವಾಗಿದೆ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಮೆರಾಜುದ್ದಿನ್ ಸಾಹೇಬರ ಸಹಿತ ಕುಮಾರಸ್ವಾಮಿ ಕೂಡ ಹೇಳಿರುವುದು! ಹಾಗಿದ್ದರೆ ಇಪ್ಪತ್ತು ತಿಂಗಳ ಅಧಿಕಾರದಲ್ಲಿ, ಕುಮಾರಸ್ವಾಮಿ ಅವರೊಂದಿಗೆ ಇದ್ದರಲ್ಲ, ಇತರ ಸಚಿವರು ಯಾವ ಪಕ್ಷದವರು ಎಂದು ಗೊತ್ತಾಗುತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ಹೇಳಿ ಗುರುಗಳೆ ?

ವೆಬ್ದುನಿಯಾವನ್ನು ಓದಿ