ವೆಬ್‌ದುನಿಯಾ ವಾರದ ಬ್ಲಾಗ್: ಏನ್ ಗುರು

ಇದೀಗ ಕನ್ನಡ ಬ್ಲಾಗ್ ಲೋಕ ಸಮೃದ್ಧಗೊಳ್ಳುತ್ತಿರುವಂತೆ ಬ್ಲಾಗ್ ವೈವಿಧ್ಯತೆಗಳೂ ಕಣ್ಣಿಗೆ ಬೀಳುತ್ತಿವೆ. ಕನ್ನಡ ಬ್ಲಾಗ್‌ಗಳಲ್ಲಿ ಪ್ರಸಕ್ತ ಆತ್ಮಕಥನಗಳೇ ಹೆಚ್ಚಾಗಿರುವುವಾದರೂ ಕೆಲವಾರು ಬ್ಲಾಗುಗಳು ಸರಿಯಾದ, ಒಂದು ಉದ್ದೇಶವಿರುವ ಜಾಡು ಹಿಡಿದುಕೊಂಡಿವೆ. ಇಂತಹ ಬ್ಲಾಗುಗಳಲ್ಲಿ 'ಏನ್ ಗುರು' (enguru.blogspot.com) ಎಂಬ ಬ್ಲಾಗ್ ಕೂಡ ಒಂದು.

ಕನ್ನಡಪರ ಕಾಳಜಿ ಪ್ರಮುಖವಾಗಿ ವ್ಯಕ್ತವಾಗುವ 'ಏನ್ ಗುರು' ಎಂಬ ಬ್ಲಾಗ್ ಹೆಸರಿನಿಂದಲೇ ಅದರಲ್ಲಿ ಯಾವ ಶೈಲಿಯ ಬರಹಗಳು ಇರುತ್ತವೆ ಎಂಬುದನ್ನು ಅಂದಾಜಿಸಬಹುದು. "ಏನ್ ಗುರು" ಬ್ಲಾಗಿಗರು ತಮ್ಮ ಕನ್ನಡಪರ ವಾದವನ್ನು ಸ್ವಲ್ಪ ಉಗ್ರವಾಗಿಯೇ ಪ್ರತಿಭಟಿಸುತ್ತಾರಾದರೂ ನಿಮಗೆ ಎಲ್ಲೂ ಅತಿ ಅನಿಸುವುದಿಲ್ಲ, ಅಥವಾ ತರ್ಕ ಮೀರಿ ದೂರ ಹೋಗುವುದಿಲ್ಲ.

ಮೈಸೂರು ದಸರಾ ಮಾಹಿತಿ ನೀಡುವ ಒಂದು ವೆಬ್‌ಸೈಟ್‌ನಲ್ಲಿ ಕನ್ನಡ ಅಕ್ಷರಗಳೇ ಇಲ್ಲವೆಂದು ಆಕ್ಷೇಪಿಸಿ ಅದರಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಆ ಲೇಖನದ ಅಂತ್ಯದಲ್ಲಿದ್ದ ಈ ಕೆಳಗಿನ ಸಾಲುಗಳನ್ನು ಓದಿ ನೋಡಿ....

"...ಕನ್ನಡದಲ್ಲಿ ಮಾಡಿ ಅಂದ್ರೆ ಕನ್ನಡದಲ್ಲಿ ಅದಾಗಲ್ಲ, ಇದಾಗಲ್ಲ, ಎಲ್ಲರಿಗೂ ಕಾಣೋಹಾಗೆ ಮಾಡಕ್ಕಾಗಲ್ಲ, ತಂತ್ರಾಂಶ ಇಲ್ಲ, ಗಿಂತ್ರಾಂಶ ಇಲ್ಲ, ಅದು-ಇದು, ಮಣ್ಣು-ಮಸಿ ಅಂತ ಉತ್ತರ ಕೊಡೋಕೆ ಮುಂದೆ ಬಂದ್ರೆ ಎಲ್ಲಕ್ಕೂ ನಮ್ಮಹತ್ತಿರ ಉತ್ರ ಇದೆ ಅಂತ ಹೇಳ್ಬೇಕು ಗುರು! ಈ ತಂತ್ರಾಂಶ-ಗಿಂತ್ರಾಂಶದ ತೊಂದರೆಗಳೆಲ್ಲ ಕುಣೀಲಾರದೇ ಇರೋರಿಗೆ ಮಾತ್ರ. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣು-ಮಸೀನೂ ಬರತ್ತೆ ಅನ್ನೋದಕ್ಕೆ ಕನ್ನಡದಲ್ಲಿ ಇವತ್ತಿನ ದಿನ ಇರೋ ಸಾವಿರಗಟ್ಲೆ ಬ್ಲಾಗುಗಳೇ ಸಾಕ್ಷಿ ಗುರು!."

ಏನೇ ಕಾರಣಗಳಿದ್ದರೂ, ಮೇಲೆ ಹೇಳಿದ ಮಾತುಗಳನ್ನು ಯಾರೂ ನಿರಾಕರಿಸಲಾರರು. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣ-ಮಸೀನೂ ಬರತ್ತೆ ಎಂದು ಖಂಡತುಂಡವಾಗಿ ಹೇಳುವ ಏನ್ ಗುರುವಿನ ಭಾಷೆ ಒರಟಾಗಿದ್ದರೂ ವಿಚಾರಪ್ರಚೋದಕವಾಗಿದೆ.

ಏನ್ ಗುರು ಬ್ಲಾಗಿನ ಭಾಷಾ ಶೈಲಿಯು ಆಡುಮಾತಿನದ್ದಾಗಿದ್ದು ಅದರ ನಿರೂಪಣೆಗೆ ಸಹಜತೆಯ ತೂಕವೂ ಸರಿಯಾಗಿ ಬೆಂಬಲ ನೀಡುತ್ತದೆ. ನಮ್ಮೆದುರು ಕೂತು ಒಬ್ಬ ವ್ಯಕ್ತಿ ವಾದ ಮಂಡಿಸುತ್ತಿರುವಂತೆ ಅಥವಾ ಭಾಷಣ ಮಾಡುತ್ತಿರುವಂತೆ ಅಥವಾ ಚರ್ಚೆ ನಡೆಸುತ್ತಿರುವಂತೆ ನಮಗೆ ತೋರುತ್ತದೆ.

ಈಗಿನ ಪಠ್ಯಪುಸ್ತಕದಲ್ಲಿ ಕನ್ನಡ ವ್ಯಾಕರಣದಲ್ಲಿ ಹಳೆಗನ್ನಡದ ಉಪಸ್ಥಿತಿಯನ್ನು ಕಡುವಾಗಿ ವಿರೋಧಿಸುವ ಏನ್ ಗುರು ಅದೇ ಸಮಯದಲ್ಲಿ ಸಂಸ್ಕೃತ ಪ್ರಾಧಾನ್ಯತೆಯನ್ನೂ ಹೀಗಳೆಯುತ್ತಾರೆ. ಕನ್ನಡದಲ್ಲಿ ಇರುವ ವ್ಯಾಕರಣವು ಬಹುತೇಕ ಸಂಸ್ಕೃತದ್ದಾಗಿದ್ದು ಅದಕ್ಕೆ ಅದರದ್ದೇ ಆದ ಪ್ರತ್ಯೇಕ ವ್ಯಾಕರಣ ರಚನೆಯಾಗಬೇಕೆಂದು ವಾದಿಸುತ್ತದೆ. ಈ ವಿಷಯದಲ್ಲಿ ಏನ್ ಗುರು ಬ್ಲಾಗಿನಲ್ಲಿ ಪ್ರಕಟವಾದ ಒಂದು ಲೇಖನದ ತುಣಕನ್ನು ಓದಿ ನೋಡಿ....

"ನಮ್ಮ ಶಾಲಾ ವ್ಯಾಕರಣಗಳ ಮುಖ್ಯ ದೋಷವೇನೆಂದರೆ, ಅವು ಹೊಸಗನ್ನಡದ ಸ್ವರೂಪವೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಯತ್ನಿಸುವ ಬದಲು, ಕೇಶಿರಾಜ, ಪಾಣಿನಿ ಮೊದಲಾದವರು ಚರ್ಚಿಸಿದ ಅತೀ ಕ್ಲಿಷ್ಟವಾದ ಮತ್ತು ಹೊಸಗನ್ನಡಕ್ಕೆ ಸ್ವಲ್ಪವೂ ಸಂಬಂಧಿಸದಂತಹ ನೂರಾರು ವಿಷಯಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಲು ಯತ್ನಿಸುತ್ತವೆ.

ಸಂಸ್ಕೃತ ಭಾಷೆಗೆ ಸಂಬಂಧಿಸಿದಂತಹ ಗುಣ, ವೃದ್ಧಿ, ಶ್ಚುತ್ವ, ಷ್ಟುತ್ವ, ಜಶ್ತ್ವ, ಮೊದಲಾದ ಸಂಧಿಕಾರ್ಯಗಳನ್ನು ಹೇಳಿಕೊಡುವ ಈ ವ್ಯಾಕರಣಗಳಿಗೆ ಕನ್ನಡದ ಉದಾಹರಣೆಗಳು ಸಿಗುವುದು ಅಸಂಭವವೇ. ಹಾಗಾಗಿ ಎಂಟನೇ ತರಗತಿಗೆ ಸಿದ್ಧವಾದ ವ್ಯಾಕರಣಗಳಲ್ಲಿ ೠವಿಲ್ಲ, ಅಮ್ಮಯ, ಷಡೂರ್ಮಿ ಮೊದಲಾದ, ಕನ್ನಡದ ಮಟ್ಟಿಗೆ ತೀರ ವಿಚಿತ್ರವಾಗಿ ಕಾಣಿಸುವ ಪದಗಳ ಪ್ರಯೋಗ ಕಾಣಸಿಗುತ್ತದೆ. ಇವನ್ನೆಲ್ಲ ಪರೀಕ್ಷೆಗಾಗಿ ಬಾಯಿಪಾಠ ಮಾಡಬೇಕಾಗಿರುವ ವಿದ್ಯಾರ್ಥಿಗಳಿಗೆ ವ್ಯಾಕರಣವೆಂಬುದೊಂದು ವಿಚಿತ್ರವಾದ ವಿಷಯವೆನಿಸಿದರೆ ತಪ್ಪೇನು?"

ಏನ್ ಗುರುವಿನ ಈ ವಾದವನ್ನು ಅಲ್ಲಗಳೆಯಲು ಸಾಧ್ಯವೇ? ಅದರ ವಿಷಯಗಳ ತರ್ಕಗಳು ಹೇಗೇ ಇರಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ತಾಕತ್ತು ಅದರ ನಿರೂಪಣೆಗಿದ್ದು, ಬರವಣಿಗೆಯಲ್ಲಿ ಅಕ್ಷರ ದೋಷಗಳು ಕೆಲವೆಡೆ ಕಾಣಿಸಿಕೊಳ್ಳುವಾಗ ಸ್ವಲ್ಪ ಪೆಚ್ಚಾಗುತ್ತದೆ. ಆದರೂ, ಬ್ಲಾಗಿನಲ್ಲಿ ಸೃಜನಶೀಲತೆಗೆ, ಹೋರಾಟಗಳಿಗೆ ಒಳ್ಳೆಯ ವೇದಿಕೆ ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ಏನ್ ಗುರು ತೋರಿಸಿಕೊಟ್ಟಿದೆ. ಅದು ತನ್ನ ಸಾಹಸವನ್ನು ಹೀಗೇ ಮುಂದುವರಿಸಲಿ.

ವೆಬ್ದುನಿಯಾವನ್ನು ಓದಿ