ಮಹಾಮಾರಿ ಏಡ್ಸ್‌ಗೆ ಅರಿವೇ ಔಷಧಿ

ರಶ್ಮಿ.ಪೈ
PTI


ಈ ಯುಗದ ಮಾರಕ ರೋಗವೆಂದೇ ಕರೆಯಲ್ಪಡುವ AIDS(Acquired immune deficiency syndrome) ದಿನೇ ದಿನೇ ವರ್ಧಿಸುತ್ತಾ ಬರುವುದನ್ನು ನಾವಿಂದು ಕಾಣಬಹುದು. ಇಂದು ವಿಶ್ವ ಏಡ್ಸ್ ದಿನ. ಈ ಮಾರಕ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಏಡ್ಸ್ ರೋಗ ಪೀಡಿತ ಜನರಿಗೆ ಸಾಂತ್ವನವನ್ನು ನೀಡುವುದೇ ಈ ಆಚರಣೆಯ ತಿರುಳು.

ಈ ಮಾರಕ ವ್ಯಾಧಿಯಿಂದ ಲೋಕವೇ ತತ್ತರಿಸುತ್ತಿರುವಾಗ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ರೋಗ ಬರದಂತೆ ತಡೆಯುವುದರಿಂದ ಮಾತ್ರವೇ ಪ್ರಸ್ತುತ ಪೀಡೆಯನ್ನು ಹೋಗಲಾಡಿಸಲು ಸಾಧ್ಯ. ಏಡ್ಸ್ ರೋಗವು HIV(Human immunodeficiency virus )ಎಂಬ ವೈರಸ್‌ನ ಸೋಂಕಿನಿಂದ ಹರಡುತ್ತಿದ್ದು ,ಇದು ಏಡ್ಸ್ ರೋಗಕ್ಕೆ ಮೂಲ ಕಾರಣವಾಗಿದೆ. ಈ ವೈರಸ್ ದೇಹದೊಳಗೆ ಪ್ರವೇಶಿಸಿ ಮುಖ್ಯವಾಗಿ ದೇಹದ ರೋಗ ಪ್ರತಿರೋಧ ವ್ಯವಸ್ಥೆಯನ್ನು ಬಾಧಿಸುತ್ತಿದ್ದು, ಹೀಗೆ ರೋಗಿಯು ದಿನೇ ದಿನೇ ಕ್ಷಯಿಸುತ್ತಾ ಬಂದು ಕೊನೆಗೆ ಉಸಿರೆಳೆಯುತ್ತಾನೆ. ಈ ವೈರಸ್ ಬಲು ಅಪಾಯಕಾರಿಯಾಗಿದ್ದು ಇದರ ಸೋಂಕಿನಿಂದ ರಕ್ಷಣೆ ಪಡೆಯಬೇಕಾದುದು ಅತ್ಯಗತ್ಯ. ಪ್ರಥಮವಾಗಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಇದು ಮತ್ತಿತರ ವೈರಸ್‌ಗಳಂತೆ ಅಲ್ಲ, ಇದರ ಸೋಂಕು ಪ್ರತ್ಯೇಕ ಕಾರಣಗಳಿಂದ ಮಾತ್ರ ಹರಡುತ್ತವೆ. ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಮಾತ್ರ ಇದು ಹರಡುತ್ತಿದ್ದು ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾದುದು ಅತ್ಯಗತ್ಯ.
PTI

ಪ್ರಧಾನವಾಗಿ HIV ಈ ಕೆಳಗಿನ ಕಾರಣಗಳಿಂದಾಗಿ ದೇಹವನ್ನು ಪ್ರವೇಶಿಸುತ್ತಿದ್ದು ಏಡ್ಸ್ ರೋಗಕ್ಕೆ ಹೇತುವಾಗುತ್ತದೆ.
1.ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ
2.HIV ಪೊಸೆಟಿವ್ ರಕ್ತದ ವರ್ಗಾವಣೆಯಿಂದ
3.HIV ಏಡ್ಸ್ ರೋಗ ಬಾಧಿತ ಮಹಿಳೆಯಿಂದ ತನ್ನ ಮಗುವಿಗೆ
4.ಅಸುರಕ್ಷಿತವಾದ ಚುಚ್ಚುಮದ್ದಿನ ಸೂಜಿಯ ಚುಚ್ಚುವಿಕೆಯಿಂದ

ಇವೇ ಪ್ರಧಾನವಾದ ಕಾರಣಗಳಾದರೂ ಇವುಗಳಿಂದ ರಕ್ಷಣೆ ಪಡೆಯಲು ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.
ಬಹುತೇಕ ಜನರು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಈ ರೋಗಕ್ಕೆ ಬಲಿಯಾಗುತ್ತಾರೆ . ಇದನ್ನು ಹೋಗಲಾಡಿಸ ಬೇಕಾದರೆ ತಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕಾದುದು ಅತ್ಯಗತ್ಯ.ಪರ ಸ್ತ್ರೀ-ಪುರುಷ ಸಂಗ ಆರೋಗ್ಯವನ್ನು ನಾಶ ಮಾಡುವುದು ಮಾತ್ರವಲ್ಲ, ಜೀವನವನ್ನೇ ಹಾಳುಗೆಡಹುತ್ತದೆ ಎಂಬುದು ಸತ್ಯವನ್ನು ನಾವರಿತಿರಬೇಕು.. ಇಂತಹ ವ್ಯಸನಕ್ಕೊಳಗಾಗುವರು ಸುರಕ್ಷಿತ ಲೈಂಗಿಕ ಸಂಪರ್ಕ ಅಂದರೆ ಕೊಂಡೋಮ್ ಅಥವಾ ಗರ್ಭನಿರೋಧಕಗಳ ಬಳಕೆಯನ್ನು ಮಾಡುವುದರಿಂದ ಏಡ್ಸ್ ರೋಗ ಬಾರದಂತೆ ತಡೆಯಬಹುದು. ಗರ್ಭಸ್ಥ ಶಿಶುವಿಗೆ ತನ್ನ ತಾಯಿಯಿಂದ ಹರಡುವ ಈ ಸೋಂಕು ಮುಗ್ದ ಮಗುವಿನ ಜೀವನವನ್ನೇ ಬರಡಾಗಿಸುತ್ತದೆ ಎಂಬುದನ್ನು ನಾವು ಮರೆಯಬಾರದು.

ಏಡ್ಸ್ ರೋಗ ಬಾಧಿತ ರೋಗಿಯೊಂದಿಗಿನ ಲೈಂಗಿಕ ಸಂಪರ್ಕದ ಪರಿಣಾಮವಾಗಿ ಜನಿಸುವ ಶಿಶುವು ಪ್ರಸ್ತುತ ರೋಗಕ್ಕೆ ಗುರಿಯಾಗುತ್ತಿದ್ದು ಬಹುತೇಕ ಮಕ್ಕಳು ಈ ಪೀಡೆಯಿಂದ ನರಳುತ್ತಿರುವುದನ್ನು ನಾವು ಕಾಣಬಹುದು .ಅದೇ ರೀತಿ ಎಚ್‌ಐವಿ ಪೊಸೆಟಿವ್ ರಕ್ತವು ಇನ್ನೋರ್ವರಿಗೆ ವರ್ಗಾವಣೆಯಾದಲ್ಲಿ,(ಇಂದು ರಕ್ತದ ವರ್ಗಾವಣೆ ನಡೆಸುವಾಗ ಇದರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುತ್ತಾರೆ) ಅಂದರೆ ಕೆಲವೊಮ್ಮೆ ಏಡ್ಸ್ ಬಾಧಿತ ರೋಗಿಯ ರಕ್ತವು ಸಾಮಾನ್ಯ ವ್ಯಕ್ತಿಯ ದೇಹದಲ್ಲಿರುವ ಗಾಯಕ್ಕೆ ತಾಗಿ ರಕ್ತದ ವರ್ಗಾವಣೆಯಾದಲ್ಲಿ ಆ ವ್ಯಕ್ತಿಗೆ ಸೋಂಕು ತಗಲುವ ಸಾಧ್ಯತೆ ಇದೆ.ಇಂತಹ ಸನ್ನಿವೇಶಗಳು ಸಾಧಾರಣವಾಗಿ ಕ್ಷೌರ ಮಾಡುವಾಗ ಸಂಭವಿಸುವುದು,ಪ್ರಸ್ತುತ ಬ್ಲೇಡಿನಿಂದುಂಟಾಗುವ ಗಾಯಗಳು ಇದಕ್ಕೆ ಎಡೆಮಾಡಿಕೊಡುತ್ತವೆ.ಆದುದರಿಂದ ಇದರ ಬಗ್ಗೆ ಜನ ಸಾಮಾನ್ಯರು ಜಾಗರೂಕರಾಗಿರ ಬೇಕು.ಇನ್ನೊಂದು ಕಾರಣವೇನೆಂದರೆ ಚಿಕಿತ್ಸಾಲಯಗಳಲ್ಲಿ ಬಳಸುವ ಅಸುರಕ್ಷಿತ ಚುಚ್ಚುಮದ್ದಿನ ಸೂಜಿಗಳಿಂದಲೂ ಇದು ಹರಡಬಹುದು.ಏಡ್ಸ್ ಬಾಧಿತರಿಗೆ ಚುಚ್ಚಲಾದ ಸೂಜಿಯನ್ನು ಇತರ ವ್ಯಕ್ತಿಗಳಿಗೆ ಚುಚ್ಚಿದಲ್ಲಿ ಈ ರೋಗವು ಹರಡುವ ಸಂಭವ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಚಿಕಿತ್ಸಾಲಯಗಳಲ್ಲಿ ಒಂದೇ ಒಂದು ಬಾರಿ ಬಳಸಿ ಬಿಸಾಡುವ ಸೂಜಿಗಳನ್ನು ಬಳಸುತ್ತಿದ್ದರೂ, ಕೆಲವು ಕಡೆ ಇಂದೂ ಕುದಿಯುವ ನೀರಿನಲ್ಲಿ ಸೂಜಿಗಳನ್ನು ಹಾಕಿ ಕ್ರಿಮಿಮುಕ್ತವನ್ನಾಗಿ ಮಾಡುವುದನ್ನು ಕಾಣಬಹುದು.ಈ ಪ್ರಕ್ರಿಯೆಯು ಸರಿಯಾಗಿ ಕಾರ್ಯವೆಸಗದಿದ್ದಲ್ಲಿ ಸೋಂಕು ಈ ರೀತಿಯಾಗಿ ಹರಡಲು ಕಾರಣವಾಗುತ್ತದೆ.

ಇವುಗಳೇ ಪ್ರಧಾನ ಕಾರಣಗಳಾದರೂ ಸಮೂಹದ ಜನರಲ್ಲಿರುವ ಕೆಲವು ತಪ್ಪುಧಾರಣೆಗಳು ಏಡ್ಸ್ ರೋಗಿಗಳನ್ನು ಸಮಾಜದಿಂದ ಹೊರಗುಳಿಯುವಂತೆ ಮಾಡಿದೆ. ಏಡ್ಸ್ ರೋಗಿಗಳ ಕೈಹಿಡಿಯುವುದರಿಂದ, ಒಟ್ಟಿಗೆ ಊಟಮಾಡುವುದು,ಸ್ಪರ್ಶ ಹಾಗೂ ಚುಂಬನದಿಂದ ರೋಗವು ಹರಡುವುದಿಲ್ಲ ಎಂಬ ಸತ್ಯವು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ. ಈ ಕಾರಣದಿಂದಾಗಿಯೇ ಏಡ್ಸ್ ರೋಗ ಬಾಧಿತ ವ್ಯಕ್ತಿಯು ಸಮಾಜದಲ್ಲಿ ತಿರಸ್ಕಾರಕ್ಕೊಳಗಾಗುತ್ತಾನೆ. ಈ ರೋಗಕ್ಕೆ ಬಲಿಪಶುವಾದ ಎಷ್ಟೋ ಮಂದಿ ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ಜೀವಕಳಕೊಂಡವರೂ,ನರಕಯಾತನೆ ಸಹಿಸುವವರೂ ನಮ್ಮೊಳಗೆ ಇದ್ದಾರೆ. ಏಡ್ಸ್ ರೋಗಿಯ ಬಗ್ಗೆ ನಿರ್ಲಕ್ಷ್ಯ ,ತಾತ್ಸಾರದ ಭಾವನೆ ಸಮಾಜದಲ್ಲಿ ಮುಂದುವರಿಯುತ್ತಾ ಇದೆ.ಇದೇ ಕಾರಣದಿಂದಾಗಿ ಏಡ್ಸ್ ಬಾಧಿತ ಮುಗ್ದ ಮಕ್ಕಳು ಶಿಕ್ಷಣ,ಸಂಸಾರ ವಂಚಿತರಾಗಿ ಬೀದಿಪಾಲಾಗಿರುವುದು ದುರದೃಷ್ಟಕರದ ಸಂಗತಿ. ಇಂತಹ ಬಲಿಪಶುಗಳಾದ ಜನರಿಗೆ ಸಾಂತ್ವನವನ್ನು ನೀಡುವ ಸಲುವಾಗಿ ಮತ್ತು ಜನಜಾಗೃತಿಯನ್ನು ಮೂಡಿಸಲು ಹಲವು ಸಂಘಸಂಸ್ಥೆಗಳು ಹಾಗೂ ಜನರು ಮುಂದೆ ಬರುತ್ತಿರುವುದು ಏಡ್ಸ್ ರೋಗಿಗಳ ಜೀವನದಲ್ಲಿ ಆಶಾಕಿರಣವನ್ನು ಮೂಡಿಸಿದೆ. ಏಡ್ಸ್‌ನ ಬಗ್ಗೆ ಇರುವ ಜ್ಞಾನವೇ ಈ ರೋಗದಿಂದ ರಕ್ಷಣೆಯನ್ನು ಒದಗಿಸುವುದು.

ಏಡ್ಸ್ ರೋಗ ಬಾಧಿತರಿಗೆ ಸಾಧಾರಣ ವ್ಯಕ್ತಿಗಳಂತೆ ಜೀವನ ನಡೆಸಲು ಅನುವು ಮಾಡಿಕೊಟ್ಟು, ಅವರಿಗೆ ಆರೈಕೆ,ಸಾಂತ್ವನವನ್ನು ನೀಡಿ ಸ್ನೇಹವನ್ನು ಹಂಚಿ ಎಂಬ ಏಡ್ಸ್ ಆರ್ಗನೈಸೇಶನ್‌ನ ಧ್ಯೇಯವಾಕ್ಯದೊಂದಿಗೆ ದನಿಗೂಡಿಸೋಣ.ಏಡ್ಸ್ ರೋಗ ಬಾಧಿತರು ನಮ್ಮಂತೆಯೇ ಈ ಸಮಾಜದಲ್ಲಿ ಬದುಕಲಿ ಅವರಿಗೆ ಬದುಕಲಿರುವ ಸ್ವಾತಂತ್ರವನ್ನು ಸಮಾಜದಲ್ಲಿ ಕಲ್ಪಿಸಿಕೊಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.ಏಡ್ಸ್ ಎಂಬ ಪೀಡೆಯನ್ನು ಬುಡ ಸಮೇತ ಕಿತ್ತೊಗೆಯಲು ಮತ್ತು ನಮ್ಮ ಕರ್ತವ್ಯವನ್ನು ನೆರವೇರಿಸಲು ಎಲ್ಲರೂ ಒಂದಾಗಿ ಕೈಜೋಡಿಸೋಣ.