ವೆಬ್‌ದುನಿಯಾ ವಾರದ ಬ್ಲಾಗ್: ಅಶೋಕ್‌ವರ್ಲ್ಡ್

ಉದಯಸಿಂಹ

ಕನ್ನಡ ಬ್ಲಾಗ್ ವಲಯದಲ್ಲಿ ಸಾಹಿತ್ಯ, ಆತ್ಮಕತೆ, ವಿಚಾರಪ್ರಚೋದಕ, ತನಿಖಾತ್ಮಕ ಬ್ಲಾಗ್‌ಗಳಿವೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಒಂದು ಬ್ಲಾಗ್ ಬಹಳ ದಿನಗಳಿಂದ ಎಲೆಮರೆ ಕಾಯಿಯಂತೆ ಬೆಳೆಯುತ್ತಿದೆ. ಅಶೋಕ್ ಎಂಬವರ ಅಶೋಕ್ ವರ್ಲ್ಡ್ (ashok567.blogspot.com) ಎಂಬ ಬ್ಲಾಗ್‌ನಲ್ಲಿ ನಾವು ನೀವು ತಿಳಿದುಕೊಳ್ಳಬೇಕಾದ ಹಾಗೂ ಕುತೂಹಲಕಾರಿಯಾದ ಹಲವಾರು ತಂತ್ರಜ್ಞಾನ ವಿಚಾರಗಳು, ಸುದ್ದಿಗಳು ಕಾಣಸಿಗುತ್ತವೆ.

ಅಶೋಕ್ ಅವರ ಈ ಬ್ಲಾಗಿನಲ್ಲಿ ಪ್ರಕಟವಾಗುವ ಲೇಖನ ಮತ್ತು ಸುದ್ದಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಮಾತ್ರ ಸೀಮಿತ. ಹಾಗಾಗಿ ಇಂತಹ ವಿಚಾರಗಳಲ್ಲಿ ಆಸಕ್ತಿಯಿರುವವರು ಯಾವುದೇ ಅಡಚಣೆಗಳಿಲ್ಲದೆ ಸರಾಗವಾಗಿ ಇವರ ಬ್ಲಾಗನ್ನು ನೋಡಿಕೊಂಡು ಹೋಗಬಹುದು. ಈ ಬ್ಲಾಗಿನಲ್ಲಿ ಬರುವ ಬಹುತೇಕ ವಿಷಯಗಳು ಕುತೂಹಲ ಮೂಡಿಸುತ್ತವೆ.

ಹಾಟ್‌ಮೇಲ್ ಬಗ್ಗೆ ನಮಗೆಲ್ಲರಿಗೂ ತಿಳಿದಿರಬಹುದು. ಅದು ಹಿಂದೊಂದು ದಿನ ಭಾರತೀಯ ವ್ಯಕ್ತಿಯೊಬ್ಬನಿಗೆ ಸೇರಿದ್ದಾಗಿತ್ತು ಎಂಬುದು ಹಲವರಿಗೆ ತಿಳಿದಿರಬಹುದು. ಆ ವ್ಯಕ್ತಿಯ ಹೆಸರು ಸಬೀರ್ ಭಾಟಿಯಾ ಎಂಬುದು ಕೆಲವರಿಗಷ್ಟೇ ತಿಳಿದಿರಬಹುದು. ಅದೇ ವ್ಯಕ್ತಿ ಇನ್ಸ್ಟಾ‌ಕೋಲ್ಲ್ ಎಂಬ ಹೊಸ ಕಂಪನಿ ಸ್ಥಾಪಿಸಿ ವಿನೂತನ ತಂತ್ರಾಂಶ ಸೇವೆಯನ್ನು ಒದಗಿಸುವುದು ಎಷ್ಟು ಮಂದಿಗೆ ತಿಳಿದಿದೆ?

ಮುಂಬರುವ ಕೆಲ ವರ್ಷಗಳಲ್ಲೇ ಅಂತರ್ಜಾಲದ ವೇಗ ಸಾಮರ್ಥ್ಯ ಕುಸಿಯುವುದು; ಗೂಗಲ್ ಮೊಬೈಲ್ ತಂತ್ರಾಂಶ; ಮನಸು ಅರಿಯುವ ವ್ಹೀಲ್ ಚೇರ್; ಜಿರಳೆ ರೊಬೋಟ್; ತಿಮಿಂಗಲಗಳ ಭಾಷೆ ಕಲಿಯಲು ವಿಜ್ಞಾನಿಗಳು ನಡೆಸುತ್ತಿರುವ ಪ್ರಯತ್ನ; ಕ್ರೆಡಿಟ್ ಕಾರ್ಡ್ ತೊಂದರೆ ಇಲ್ಲದೆಯೇ ಬೆರಳ ಸ್ಪರ್ಶದಿಂದ ಪೆಟ್ರೋಲ್ ಸೇವೆಯ ಲಭ್ಯತೆ; ಆಂಗ್ಲೇತರ ಭಾಷೆಗಳಲ್ಲಿ ಅಂತರ್ಜಾಲ ವಿಳಾಸಗಳನ್ನು ಬೆರಳಚ್ಚಿಸಲು ಸಾಧ್ಯಗೊಳಿಸುವಂತಹ ಪ್ರಯತ್ನಗಳು ಇನ್ನೂ ಮುಂತಾದ ನೂರಾರು ಕೌತುಕದ ಲೇಖನಗಳು ಅಶೋಕ್ ಅವರ ಬ್ಲಾಗಿನಲ್ಲಿ ಕಾಣಸಿಗುತ್ತವೆ.

ಈ ಬ್ಲಾಗಿನಲ್ಲಿ ಉಪಯುಕ್ತ ಮಾಹಿತಿಗಳ ಜೊತೆಗೆ ಮೆಚ್ಚುಗೆಯಾಗುವ ಇನ್ನೊಂದು ಅಂಶವೆಂದರೆ ಲೇಖಕರ ಭಾಷಾ ಹಿಡಿತ. ಸರಳ ಕನ್ನಡದಲ್ಲಿ ನಿರೂಪಣೆ ಮಾಡುವ ಸಾಮರ್ಥ್ಯವನ್ನು ಅಶೋಕ್ ಹೊಂದಿದ್ದಾರೆ. ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಬರೆಯುವಾಗ ಇದು ಅತ್ಯಾವಶ್ಯ. ಆದರೆ ಅಶೋಕ್ ಅವರು ಲೇಖನ ಬೆರಳಚ್ಚಿಸುವಾಗ ವಿರಾಮ ಚಿಹ್ನೆಗಳ ಬಗ್ಗೆ ಸ್ವಲ್ಪ ಗಮನಹರಿಸಿದಲ್ಲಿ ಅವರದ್ದೊಂದು ಸುಂದರ, ಪರಿಪೂರ್ಣ ಬ್ಲಾಗ್ ಎಂದು ಎದ್ದುಗಾಣುತ್ತದೆ. ಅವರು ಹೀಗೆಯೇ ತಮ್ಮ ತಂತ್ರಗಳನ್ನು ಕನ್ನಡಿಗರಿಗೆ ನೀಡುವುದನ್ನು ಮುಂದುವರಿಸಲೆಂದು ವೆಬ್‌ದುನಿಯಾ ಹಾರೈಸುತ್ತದೆ.

ವೆಬ್ದುನಿಯಾವನ್ನು ಓದಿ