ವೆಬ್‌ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!

WD
ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.

ನಿಮ್ಮನ್ನು ನೋಡಿದ ತಕ್ಷಣವೇ ಪೆನ್ನು/ಕುಂಚ ಹಿಡಿದು ತಟಪಟನೆ ಗೆರೆ ಎಳೆದು ಕಾಗದದಲ್ಲಿ ನಿಮ್ಮ ಮುಖ ಮೂಡಿಸುವ ಕಲೆ ಸಿದ್ಧಿಸಿರುವ ಹರಿಣಿಯವರ ನಗಿಸುವ ಗೆರೆಗಳು ಅಥವಾ ಮನರಂಜನಾ ವ್ಯಂಗ್ಯಚಿತ್ರಗಳು (ಅವರೇ ಹೇಳಿಕೊಳ್ಳುವಂತೆ Entertoonment) ಇನ್ನು ಮುಂದೆ ನಿಮ್ಮ ಮೆಚ್ಚಿನ ಕನ್ನಡ ಅಂತರ್ಜಾಲ ತಾಣವಾಗಿರುವ ವೆಬ್‌ದುನಿಯಾದಲ್ಲಿ ಮೂಡಿಬರಲಿದೆ.

ಹರಿಣಿಯವರ ಜನ್ಮಭೂಮಿ ಕೇರಳದ ತಲಚ್ಚೇರಿ ಆದರೂ ಅವರ ಕರ್ಮಭೂಮಿ ಕರ್ನಾಟಕ, ಮಂಗಳೂರಿನ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಉದ್ಯೋಗಿಯಾಗಿರುವ ಹರಿಣಿ ಅವರಿಗೆ ಈ ಕಲೆ ಜನ್ಮಜಾತವಾಗಿ ಸಿದ್ಧಿಸಿದ್ದಲ್ಲ. ಸ್ವಂತ ಪರಿಶ್ರಮ, ದಣಿವರಿಯದ ಸಾಧನೆ ಅವರನ್ನು ಈ ಮಟ್ಟಕ್ಕೇರಿಸಿದೆ.

19ರ ಹರೆಯದಲ್ಲಿ, ಬಿಎಸ್ಸಿ ಓದುತ್ತಿರುವಾಗ ಕಾರ್ಟೂನ್ ಬರೆಯುವುದನ್ನು ಆರಂಭಿಸಿದ್ದ ಹರಿಶ್ಚಂದ್ರ ಶೆಟ್ಟಿ ಅವರ ಮೊದಲ ಕಾರ್ಟೂನು ಪ್ರಕಟವಾಗಿರುವುದು 1977ರಲ್ಲಿ ಕರ್ಮವೀರ ಪತ್ರಿಕೆಯಲ್ಲಿ. ಆ ಬಳಿಕ ಕನ್ನಡದ ಬಹುತೇಕ ಎಲ್ಲ ನಿಯತಕಾಲಿಕಗಳಲ್ಲಿಯೂ ಅವರ ಕೈಚಳಕ ಕಾಣಿಸಿಕೊಂಡಿದೆ. ಸಾವಿರಾರು ಅಭಿಮಾನಿ-ಮಿತ್ರರ ಬಳಗ ಹೊಂದಿರುವ ಹರಿಣಿ ಅವರ 'ಪೋಕ್ರಿ' ಹೆಸರಿನ ಮಕ್ಕಳ ಕಾರ್ಟೂನು ಪುಸ್ತಕವು ಅತ್ಯಂತ ಜನಪ್ರಿಯ.

ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದ್ದು, ಇದು ಪ್ರೀತಿಯ ಓದುಗರಿಗೆ ಇಷ್ಟವಾಗಬಹುದು ಅಂತ ನಮ್ಮ ಅನಿಸಿಕೆ.

ಅವರ ಕಾರ್ಟೂನುಗಳನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ವೆಬ್ದುನಿಯಾವನ್ನು ಓದಿ