'ಬೋಧನೆಯ ಸಂತೃಪ್ತಿ, ಗೌರವ ದೊಡ್ಡದು'

ಸಂದರ್ಶನ: ನ್ಯೂಸ್ ರೂಂ ಬೆಂಗಳೂರು
NRB
ಪ್ರೊ.ಕೆ.ಇ.ರಾಧಾಕೃಷ್ಣ ಬೆಂಗಳೂರಿನ ಹೆಸರಾಂತ ಶಿಕ್ಷಣ ತಜ್ಞರು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ಮಾಡುವ ಮೂಲಕ ಹೆಸರು ಮಾಡಿರುವ ಅವರು, ಪ್ರಸ್ತುತ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಪ್ರಾಂಶುಪಾಲರು. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಅವರು ವೆಬ್ ದುನಿಯಾದೊಂದಿಗೆ ಮಾತನಾಡಿದ್ದಾರೆ.

ಹಿಂದಿನ ಶಿಕ್ಷಣ ಪದ್ಧತಿ ಮತ್ತು ಇಂದಿನ ಶಿಕ್ಷಣ ಪದ್ಧತಿಯಲ್ಲಿ ವ್ಯತ್ಯಾಸವೇನು ಕಂಡಿರಿ?

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಬಿಗು ವಾತಾವರಣವಿತ್ತು. ಅಧ್ಯಾಪಕರು ಹೇಳಿದ್ದೇ ವೇದ ವಾಕ್ಯ ಎನ್ನುವ ಭಾವನೆಯೂ ವಿದ್ಯಾರ್ಥಿಗಳಲ್ಲಿತ್ತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವಲ್ಲದೆ ವಿಷಯಾಂತರಕ್ಕೆ ಅವಕಾಶವಿರಲಿಲ್ಲ. ಅಧ್ಯಾಪಕರಿಗೂ ಶಿಕ್ಷಣ, ಬೋಧನೆ ಬಿಟ್ಟರೆ ಬೇರೆ ಯಾವ ಯೋಚನೆಗಳೂ ಇರಲಿಲ್ಲ. ಆದರೆ ವಿದ್ಯಾರ್ಥಿಗಳಿಗೂ ಇಂದು ವಿವಿಧ ಕಡೆಗಳಿಂದ ಜ್ಞಾನ ಸುಲಭವಾಗಿ ದೊರೆಯುತ್ತಿದೆ. ಜ್ಞಾನ ಪ್ರಸರಣ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಮೌಲ್ಯದ ವಿಚಾರಕ್ಕೆ ಬಂದಾಗ ಆರ್ಥಿಕ ಮೌಲ್ಯ ಮುಂಚೂಣಿಯಲ್ಲಿದೆ. ಕೆರಿಯರಿಸ್ಟ್ ಆಗುವುದೇ ವಿದ್ಯಾರ್ಥಿಗಳ ಮುಖ್ಯ ಗುರಿಯಾಗುತ್ತಿದೆ.

ಬದಲಾದ ಶಿಕ್ಷಣ ವ್ಯವಸ್ಥೆಗೆ ಇಂದು ಹೇಗೆ ಗುರು ವೃಂದ ತೆರೆದುಕೊಂಡಿದೆ ?

ಈ ವ್ಯವಸ್ಥೆಗೆ ಶಿಕ್ಷಕರು ಸಹಜವಾಗಿಯೇ ಒಗ್ಗಿಕೊಂಡಿದ್ದಾರೆ. ಬೋಧನೆಯ ವಿಧಾನ ಬದಲಾಗಿದೆ. ಪವರ್ ಪಾಯಿಂಟ್ ಪ್ರೆಸೆಂಟೇಶನ್ ತರಗತಿಗಳಲ್ಲಿ ನಡೆಯುತ್ತಿದೆ. ದೃಶ್ಯ ಮಾಧ್ಯಮಗಳ ಮೂಲಕ ಬೋಧನಾ ಕ್ರಮ ಆರಂಭಗೊಂಡಿದೆ. ವೃತ್ತಿ ಬದುಕಿಗೆ ಯಾವುದು ಹೆಚ್ಚು ಡಿಮಾಂಡ್ ಅನ್ನಿಸುತ್ತಿದೆಯೋ ಅಂತಹ ವಿಷಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದಾಗಿ ಮಾನವಿಕ ಶಾಸ್ತ್ರ, ಸಮಾಜ ಶಾಸ್ತ್ರ, ಸಾಹಿತ್ಯ ವಿಭಾಗಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚು ಅವಕಾಶ ಸಿಗುತ್ತಿದೆಯೋ ಅದಕ್ಕೆ ಹೆಚ್ಚು ಬೇಡಿಕೆ.

ಅಂದರೆ ಸಾಹಿತ್ಯ, ಚರಿತ್ರೆಗಳು ಮೂಲೆಗುಂಪಾಗುವುದೇ ?

ಖಂಡಿತಾ. ಈ ನಿಟ್ಟಿನಲ್ಲಿ, ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಇಂತಹ ವಿಚಾರಗಳನ್ನೂ ಕಡ್ಡಾಯವಾಗಿ ಬೋಧಿಸುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಮನಸ್ಸು ಮಾಡಬೇಕು.

ಇಂದು ಗುರು ಶಿಷ್ಯ ಸಂಬಂಧ ಹೇಗಿದೆ ?

ಚೆನ್ನಾಗಿಯೇ ಇದೆಯಲ್ಲ. ಉತ್ತಮ ಗುರುಗಳ ಬಗ್ಗೆ ಶಿಷ್ಯ ವರ್ಗಕ್ಕೆ ಸದಾ ಗೌರವ ಇದ್ದೇ ಇರುತ್ತದೆ.

ಶಿಕ್ಷಕರ ದಿನದ ಸಂದರ್ಭದಲ್ಲಿ ಶಿಕ್ಷಕರಾಗಿ ನಿಮ್ಮ ಪುನರ್ವಿಮರ್ಶೆ ಏನು ?

ಶಿಕ್ಷಕರು ತಮ್ಮ ಬಗ್ಗೆ ಹೆಮ್ಮೆ ಪಡಬೇಕು. ಈ ವೃತ್ತಿಯನ್ನು ಬೇರೆ ವೃತ್ತಿಯವರ ಜತೆ ಹೋಲಿಸಬಾರದು. ಇಲ್ಲಿ ಸಿಗುವ ಖುಷಿ, ಸಂತೃಪ್ತಿ, ವಿದ್ಯಾರ್ಥಿಗಳಿಂದ ಸಿಗುವ ಗೌರವ ದೊಡ್ಡದು. ಹಿಂದಿನ ಕಾಲದಂತೆ ಅಧ್ಯಾಪಕರು ಈಗ ಬಡವರಾಗಿಯೂ ಉಳಿದಿಲ್ಲ.

ಆದರೆ ಶಿಕ್ಷಕ ವೃತ್ತಿಯತ್ತ ಇಂದು ಯುವಜನತೆ ಆಸಕ್ತಿ ಕಳೆದುಕೊಳ್ಳುತ್ತಿದೆಯಲ್ಲ ?
ಬೇರೆ ವೃತ್ತಿಗೆ ಹೋಲಿಸಿದರೆ ಇಲ್ಲಿ ವೇತನ ಕಡಿಮೆ. ಸಮಾಜದ ಇತರ ವೃತ್ತಿಗೆ ಹಿನ್ನಡೆಯಾದ ಹಾಗೆಯೇ ಈ ವೃತ್ತಿಗೂ ಹಿನ್ನಡೆಯಾಗಿದೆ. ಈ ವೃತ್ತಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕಬೇಕು.

ವಿದ್ಯಾರ್ಥಿಗಳಿಗೆ ನಿಮ್ಮ ಹಿತವಚನ ಏನು ?

ಯುವಜನತೆ ತಮ್ಮ ಮನಸ್ಸನ್ನು ಚಂಚಲ ಮಾಡಿಕೊಳ್ಳಬಾರದು. ಓದುವ ಹಂಬಲ, ಸಾಧಿಸುವ ಛಲವಿರಬೇಕು. ಆದರೆ ಇಂದು ಮೊಬೈಲ್‌ಗಳು ವಿದ್ಯಾರ್ಥಿಗಳಿಗೆ ಮಾನಸಿಕ ರೋಗವಾಗಿ ಕಾಡುತ್ತಿವೆ. ತಂತ್ರಜ್ಞಾನಗಳ ಭರಾಟೆಯಲ್ಲಿ ಓದು ನಶಿಸಬಾರದು.