ಕವನ: ಮಳೆ ಬರಲಿ

ಎಸ್.ಎಲ್. ಸುರೇಂದ್ರ ಕುಮಾರ್
WD




ಬರಲಿ ಮಳೆ, ಮಳೆ ಬರಲಿ
ಭರಣಿ ಮಳೆ ಬರಲಿ
ಸ್ವಾತಿ ಚಿತ್ತಾ ತರಲಿ
ಅಶ್ವಿನಿ ಬಂದು ಹರಸಲಿ.

ಬರಲಿ ಮಳೆ, ಮಳೆ ಬರಲಿ
ಬರಿದ ಭುವಿಗೆ ನೀರುಣಿಸಿ ತಣಿಸಲಿ
ಹಸಿರ ರಾಶಿ ಹರಡಲಿ
ಕೋಗಿಲೆಯ ಗಾನ ಮೊಳಗಲಿ.

ಬರಲಿ ಮಳೆ, ಮಳೆ ಬರಲಿ
ಕೃತಿಕ, ರೋಹಿಣಿ ಧಮ ಧಮನೆ ಹರಿಯಲಿ
ಮೃಗಶಿರವು ಮಂಜಿನ ಧವಳದಂತೆ
ಆರ್ದ್ರಾವು ಹನಿ ಹನಿಯ ಗೂಡಿ ಹರಿಯಲಿ.

ಬರಲಿ ಮಳೆ, ಮಳೆ ಬರಲಿ
ತಂಪು ತಂಪಾಗಲಿ ಭುವಿಯೊಳಗಿನ ಕಾವು ಹಾರಲಿ
ಕಂಪುಕಂಪಾಗಲಿ ಗಿಡಮರಗಳಾಗಂಧ ಹರಡಲಿ
ರಾಗನು ರಾಗದಲಿ ಝರಿಯು ಜಳಜಳನೆ ಹರಿಯಲಿ.

ಬರಲಿ ಮಳೆ, ಮಳೆ ಬರಲಿ
ವಿಶಾಲ ಧರಣಿಗೆ ವಿಶಾಖ ಬಂದು ಹರಸಲಿ
ಅನುರಾಧವು ಅನುಕೂಲ ಸಿಂಧುವಾಗಿ ಬರಲಿ
ಜೇಷ್ಠ ಮೂಲ ಪೂಜಾಗಳಾದಿಯಾಗಿ ಸುರಿಯಲಿ.