ಎರಡು ಮುಖಗಳು-1

PTI
ಸುರತ್ಕಲ್ ಹೊತ್ತಿ ಉರಿಯುತ್ತಿತ್ತು. ಜನರ ಮನಸ್ಸು ಅಶಾಂತಿಗೀಡಾಗಿ ತತ್ತರಿಸುತ್ತಿತ್ತು. ವ್ಯಾಪಕ ಗಾಳಿಸುದ್ದಿ ಹಬ್ಬುತ್ತಿತ್ತು. ಕೆಲ ಪತ್ರಿಕೆಗಳಲ್ಲಿ ಪುಂಖಾನುಪುಂಕಿಯ ವರದಿಗಳು ಬರುತ್ತಿತ್ತು.

ಅದು ಮತೀಯ ಗಲಭೆ,ಗುಂಪು ಘರ್ಷಣೆ, ಕೋಮುಗಲಭೆ ಮುಂತಾದ ಹೆಸರಿನಿಂದ ಗುರುತಿಸಲ್ಪಟ್ಟು ಜಿಲ್ಲೆಯನ್ನೇ ನಡುಗಿಸುತ್ತಿದ್ದ ದಿನವೊಂದರ ರಾತ್ರಿ ಬಾಲ್ಯ ಸ್ನೇಹಿತರಾಗಿದ್ದ ಪ್ರಕಾಶ್ ಮತ್ತು ರಮೇಶ್ ಬಾರೊಂದರ ನಡುವೆ ಇದ್ದ ಮೇಜಿನ ಮುಂದೆ ಎದುರುಬದುರಾಗಿ ಕೂತಿದ್ದಾರೆ.

ಇಬ್ಬರ ಕೈಯಲ್ಲೂ ಸಿಗರೇಟಿನ ತುಂಡಿದೆ. ಎರಡು ಕಪ್‌ನಲ್ಲಿ ಅರ್ಧರ್ಧ ಕಾರುವ ವಿಸ್ಕಿಯನ್ನು ಕುಡಿಯಲು ರಮೇಶ್ ಮತ್ತು ಪ್ರಕಾಶ್‌ರ ನಾಲಗೆಗಳು ಹಾತೊರೆಯುತ್ತಿದ್ದವು.

ಪ್ರಕಾಶ್ ಓರ್ವ ಸರಕಾರಿ ವೈದ್ಯ. ರಮೇಶ್ ಖಾಸಗಿ ಸಂಸ್ಥೆಯೊಂದರ ಮೆನೇಜರ್.ಇಬ್ಬರಲ್ಲೂ ಕೈ ತುಂಬಾ ಕಾಸಿದೆ. ಒಂದೇ ನಗರದ ಎರಡು ಪ್ರತ್ಯೇಕ ಅಪಾರ್ಟ್‌ಮೆಂಟ್ ಗಳಲ್ಲಿ ವಾಸ. ಇಬ್ಬರದ್ದೂ ಸುಖಹೊತ್ತ ಸಂಸಾರ.

ವಾರದಲ್ಲೊಂದು ದಿನ ನಗರದ ಬಾರೊಂದರಕ್ಕೆ ಹೊಕ್ಕು ಹಿಡಿತ ಸಿಗುವಷ್ಟು ಕುಡಿಯುತ್ತಾರೆ. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ.ಅಂದರೆ ಇಬ್ಬರ ಮಾನಸಿಕ ಅಭಿಪ್ರಾಯಗಳು ತದ್ವಿರುದಿದ್ದವಾದುದು.ಆದರೆ ಅವರ ಸ್ನೇಹಕ್ಕೆ ಕತ್ತರಿಯಿಲ್ಲ.ಚರ್ಚೆಗೊಂದು ಕೊನೆ ಎಳೆದು ನಡುರಾತ್ರಿಯಲ್ಲೇ ರಿಕ್ಷಾ ಹಿಡಿದು ತಮ್ಮ ಅಪಾರ್ಟ್‌ಮೆಂಟ್ ಸೇರುತ್ತಾರೆ.ಇದು ಕಳೆದ ಹಲವಾರು ವರ್ಷಗಳಿಂದ ಈ ಸ್ನೇಹಿತರ ನಡುವೆ ನಡೆದು ಬಂದ ವಾಡಿಕೆಯಾಗಿದೆ.

"ನಿನಗೆ ಗೊತ್ತಿಲ್ಲ ಪ್ರಕಾಶ್, ಸುರತ್ಕಲ್ ಘಟನೆಯಿಂದ ಒಂದೊಂದು ಟ್ರೀಟ್‌ಮೆಂಟ್ ಕೊಡದ್ದಿದ್ದರೆ, ಈ ದೇಶವನ್ನೇ ಇವರು ಇಸ್ಲಾಮೀಕರಣ ಮಾಡಿಯಾರು.ಇವರಿಗೆ ಇದೆಲ್ಲಾ ಅಗ್ನಿಪರೀಕ್ಷೆಯ ಸ್ಯಾಂಪಲ್ ಅಷ್ಚೇ. ಆವಾಗಲಾದರೂ ಸರಿದಾರಿಗೆ ಬರುತ್ತಾರಾ ನೋಡುವ....?"

"ಅವರನ್ನು ಸರಿ ದಾರಿಗೆ ತರುವ ಮೊದಲು ನಮ್ಮ ರಾಜಕಾರಣಿಗಳನ್ನು ಸರಿದಾರಿಗೆ ತರುವ ವ್ಯವಸ್ಥೆ ಮಾಡು" ಪ್ರಕಾಶ್‌ನ ಸಿಗರೇಟಿನ ತುಂಡು ಕೆಂಪಾಗುತ್ತಲಿತ್ತು.

" ಛೆ....ನೀನು ಯಾವುದನ್ನೂ ಅಷ್ಚು ಸೀರಿಯಸ್ ಮಾಡುವುದೇ ಇಲ್ಲ. ಇವರುಂಟಲ್ಲ, ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಆಡುವಾಗ ನೋಡು.ಇಲ್ಲಿ ಕೂತು ಪಾಕಿಸ್ತಾನ ಕ್ಕೆ ಸಪೋರ್ಟ್ ಕೊಡ್ತಾರೆ.ನಮ್ಮ ಅನ್ನ ತಿಂದು ನಮಗೆ ಎದುರು ನಿಲ್ತಾರೆ.ಇವರಿಗೆ ನಮ್ಮ ಕ್ರಿಕೆಟ್ ಆಟಗಾರರು ಮೆಚ್ಚುಗೆಯಾಗುವುದಿಲ್ಲ.ಅವರಲ್ಲಿ ಒಬ್ಬ ಸಿಕ್ಸ್ ಹೊಡೆದರೆ ಸಾಕು.ಇವರು ಹುಚ್ಚೆದ್ದು ಕುಣಿಯುತ್ತಾರೆ. ಪಾಕಿಸ್ತಾನ ಗೆಲ್ತದೆ ಅಂತ ಸಾವಿರಗಟ್ಲೆ ಬೆಟ್ ಕಟ್ತಾರೆ.ಅಜರ್ ಸೆಂಚುರಿ ಹೊಡೆದರೆ ಖುಷಿ. ಅದೇ ಸಚಿನ್ ಸೆಂಚುರಿ ಹೊಡೆದರೆ ತಲೆ ಬಿಸಿ. ನಿಂಗೆ ಇದೆಲ್ಲಾ ಸರಿ ಅಂತ ಕಾಣ್ತದಾ? ನಾವಿನ್ನು ಎಷ್ಟು ಸಮಯಾಂತ ಇದನ್ನೆಲ್ಲಾ ಸಹಿಸಿ ಕೂರುವುದು? ಇವರ ನಿದ್ದೆಗೆಡಿಸಬೇಕಾದರೆ ಇನ್ನೂ ಇಂಥ ನಾಲ್ಕೈದು ಗಲಾಟೆ-ಪ್ರಕರಣಗಳು ನಡೆಯಬೇಕು!"

(ಲೇಖಕರ ಪರಿಚಯ - ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಂಝ ಮಲಾರ್ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರೆಯಲಾರಂಭಿಸಿರುವ ಹಂಝ, ಮುಸ್ಲಿಂ ಬದುಕಿನ ಒಳಹೊರಗುಗಳ ಸುತ್ತ ಹಲವಾರು ಕಥೆಗಳನ್ನು ಹೆಣೆದಿದ್ದಾರೆ. ಇವರ ಅನೇಕ ಕಾದಂಬರಿಗಳೂ ಪ್ರಕಟವಾಗಿವೆ.)

- ಹಂಝ ಮಲಾರ್

ವೆಬ್ದುನಿಯಾವನ್ನು ಓದಿ