ಮುಖವಾಡ

Vishnu
ರಾತ್ರಿ 10 ಗಂಟೆಯಾಗಿತ್ತು. ತಾಳಿಪಿಂಡ್ ಜುಮ್ಮಾ ಮಸೀದ್‌ನ ಖತೀಬರಾದ ಅಲ್‌ಹಾಜ್ ಎಂ.ಬಿ.ಬೀರಾನ್ ಉಸ್ತಾದ್, ಯಾಸೀನ್ ಓದಿ ಮುಸಾಫ್ ಮಡಚಿಟ್ಟು ಸಲಾತನ್ನು ಬಾಯಲ್ಲಿ ಗುಣಗುಟ್ಟುತ್ತಿರುವಾಗ ಅವರಿಗೆ ಯಾರೋ ಬಾಗಿಲು ಬಡಿದ ಶಬ್ದವಾಯಿತು.

'ಯಾರು?' ಎಂದು ಕೇಳುತ್ತಾ ಬಾಗಿಲು ತೆರೆದ ಉಸ್ತಾದ್‌ರಿಗೆ ಹದಿನಾಲ್ಕು ಹರೆಯದ ಹುಡುಗನೊಬ್ಬ ಚೆಂಬಲ್ಲಿ ನೀರು ಮತ್ತು ಕಪ್ಪು ನೂಲನ್ನು ಹಿಡಿದು ಎದುರಲ್ಲಿ ನಿಂತುದನ್ನು ಕಂಡು ಆಶ್ಚರ್ಯವಾಗಿತ್ತು.

'ಏನು ಮೋನೇ? ಯಾಕೆ ಬಂದೆ?' ಎಂದು ಉಸ್ತಾದರು ಕೇಳಿದರು.

'ಉಸ್ತಾದ್... ನನ್ನ ಅಮ್ಮನಿಗೆ ಹುಷಾರಿಲ್ಲ. ಈ ನೀರು ಮತ್ತು ನೂಲನ್ನು ಮಂತ್ರಿಸಿ ಕೊಡಬೇಕಂತೆ' ಎಂದು ಹುಡುಗ ಹೇಳಿದಾಗ ಉಸ್ತಾದರು ಅದು ತನ್ನ ಕರ್ತವ್ಯ ಎನ್ನುವಂತೆ ಬಾಯಲ್ಲಿ ಅದೇನೋ ಹೇಳಿ ಮೂರು ಬಾರಿ ಊದಿ ಅದನ್ನು ಹುಡುಗನ ಕೈಗಿತ್ತರು.

ಹುಡುಗ ಆ ಕತ್ತಲಲ್ಲಿ ಸೀಳಿ ಹೋಗಲು ಮುಂದಾದಾಗ ಉಸ್ತಾದರ ಮನಸ್ಸು ಕರಗಿತು. ರೂಮಿನೊಳಗೆ ಹೊಕ್ಕು ತನ್ನ ಮೂರು ಸೆಲ್‌ನ ಟಾರ್ಚ್‌ ಲೈಟನ್ನು ಕೈಯಲ್ಲಿ ಹಿಡಿಯುತ್ತಾ 'ಹುಡುಗ ನಿನ್ನ ಹೆಸರೇನು? ನೀನು ಯಾರ ಮಗ' ಎಂದು ಕೇಳಿ 'ನಾಳೆ ಬೆಳಿಗ್ಗೆ ಈ ಲೈಟ್ ತಂದು ಕೊಡು' ಎಂದರು.

ನಾನು ರವೂಫ್ ಅಂತ. ಮರಿಯಮ್ಮಾದರ ಮಗ. ನನ್ನನ್ನು ಹೆಚ್ಚಾಗಿ ಎಲ್ಲರೂ ಚೆರೆಮೋನು ಅಂತ ಕರೆಯುತ್ತಾರೆ. ನಿಮಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವರಿವರು ಹೇಳಿದ್ದನ್ನು ನೀವು ಕೇಳಿರಬಹುದು. ನನ್ನ ಅಬ್ಬ 10 ವರ್ಷ ಹಿಂದೆ ಇದೇ ಈ ಹೌಲಲ್ಲಿ ವಲು ಮಾಡುತ್ತಿರುವಾಗ ಆಕಸ್ಮಾತ್ ತಲೆ ತಿರುಗಿ ಬಿದ್ದು ಸ್ವರ್ಗಕ್ಕೆ ಹೋಗಿದ್ದಾರಂತೆ' ಎಂದು ಹುಡುಗ ಹೇಳಿದಾಗ ಉಸ್ತಾದರಿಗೆ ಹುಡುಗನ ಮಾತೇ ನಂಬಲಿಕ್ಕಾಗಲಿಲ್ಲ.

ಮರುದಿನ ಲುಹರ್ ನಮಾಜ್ ಮಾಡಲು ಬಂದ ಬಾವಾಕನನ್ನು ಹತ್ತಿರ ಕರೆದ ಉಸ್ತಾದರು ರಾತ್ರಿ ಬಂದ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡರು.

'ಹೌದು ಉಸ್ತಾದ್!ಆ ಹುಡುಗನ ತಂದೆಯ ಹೆಸರು ಇಬ್ರಾಹಿಂ ಅಂತ. ಬಾರೀ ನಿಯತ್ತಿನ ಮನುಷ್ಯ. ಮೈ ಕಾಲದಿಂದ ಸೈಕಲಿನಲ್ಲಿ ಮೀನು ತಂದು ಊರಲ್ಲಿ ಮಾರಿ ಬದುಕುತ್ತಿದ್ದ. ಅದೊಂದು ದಿನ ಪಾಪ, ಆತ ಈ ನಮ್ಮ ಪಳ್ಳಿಯ ಹೌಲ್‌ಗೆ ಬಿದ್ದು ಕಣ್ಮುಚ್ಚಿ ಬಿಟ್ಟ. ಅಂದಿನಿಂದ ಆ ಮರಿಯಮ್ಮ ಈ ಹುಡುಗನಿಗಾಗಿ ಬಾರೀ ಕಷ್ಟದಿಂದ ಬದುಕುತ್ತಿದ್ದಾಳೆ. ಒಂದು ಹೊತ್ತು ಊಟ ಮಾಡಿದರೆ ಮತ್ತೊಂದು ಹೊತ್ತು ಉಪವಾಸ ಇರ್ತಾಳೆ. ಇರಲು ಸರಿಯಾದ ಮನೆಯೂ ಇಲ್ಲ. ಅವಳ ಚೆಂದವೇ ಅವಳ ನೆಮ್ಮದಿಯನ್ನು ಹಾಳು ಮಾಡಿದೆ. ಕೆಲವರು ಅವಳಿಗೆ ಅನೈತಿಕ ಕಿರಕುಳ ಕೊಡಲು ಹೋದದ್ದಿದೆ. ಆದರೆ ಅವಳು ಅದನ್ನೆಲ್ಲ ಪಡೆದವನಿಗೆ ಹೆದರಿ ಹಿಮ್ಮೆಟ್ಟಿದ್ದಾಳೆ' ಎಂದು ಬಾವಾಕ ವಿವರ ನೀಡತೊಡಗಿದ.

ಉಸ್ತಾದರಿಗೆ ಈ ಮಾತು ಕೇಳಿ ತಲೆ ಹಾಳಾಯಿತು. ನೆರೆಮನೆಯವ ಹಸಿದಿರುವಾಗ ಹೊಟ್ಟೆ ತುಂಬಾ ತಿನ್ನುವವ ನಮ್ಮವನಲ್ಲ ಮತ್ತು ಒಂದು ಊರು ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಮುಖವಾಡ ಧರಿಸಿರಬಾರದೆಂಬ ನುಡಿಮುತ್ತು ಉಸ್ತಾದರ ಮನಸ್ಸಿಗೆ ನಾಟಿತು.

ಹಾಗೇ ಇಶಾ ನಮಾಜು ಮಾಡಿ ಒಂದು ಬುತ್ತಿ ಅನ್ನ ಗಂಟಲಿಗೆ ಇಳಿಸಿದ ಉಸ್ತಾದರು ಸೀದಾ ಬಾವಾಕನ ಜತೆಗೂಡಿ ಮರಿಯಮ್ಮನ ಮನೆಗೆ ಹೋದರು.

- ಹಂಝ ಮಲಾರ್

ಲೇಖಕರ ಪರಿಚಯ - ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಂಝ ಮಲಾರ್ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರೆಯಲಾರಂಭಿಸಿರುವ ಹಂಝ, ಮುಸ್ಲಿಂ ಬದುಕಿನ ಒಳಹೊರಗುಗಳ ಸುತ್ತ ಹಲವಾರು ಕಥೆಗಳನ್ನು ಹೆಣೆದಿದ್ದಾರೆ. ಇವರ ಅನೇಕ ಕಾದಂಬರಿಗಳೂ ಪ್ರಕಟವಾಗಿವೆ.

ವೆಬ್ದುನಿಯಾವನ್ನು ಓದಿ