ಅನುಬಂಧ

ಶರೀಫ್ ತನ್ನ ಮೆಡಿಕಲ್ ಶಾಪ್‌ನತ್ತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಮುಂದಿನ ಭಾನುವಾರ ತನ್ನ ಮದುವೆ ಇರುವ ಕಾರಣ ಅವನಿಗೆ ಸ್ವಲ್ಪವೂ ಪುರುಸೊತ್ತಿರಲಿಲ್ಲ. ಪತ್ನಿಯಾಗಿ ಬರುವ ಆ ಮದುಮಗಳ ಉರುಟುರುಟಾದ ಮುಖವನ್ನು ನೆನಪಿಸುತ್ತಾ ಸಂತಸದಲ್ಲಿ ತೇಲುತ್ತಲೇ ಬೈಕ್ ಚಲಾಯಿಸುತ್ತಿದ್ದ.

ಶರೀಫ್‌ನ ಬೈಕ್ ನೇತ್ರಾವತಿ ಸೇತುವೆಯಲ್ಲಿ ಚಲಿಸುತ್ತಿತ್ತು. ಗಂಟೆ ಸುಮಾರು ಬೆಳಿಗ್ಗೆ ಎಂಟುವರೆಯಾಗಿರಬಹುದು. ಎದುರಲ್ಲಿ ಹೋಗುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡುತ್ತಾ ಮುಂದೆ ಸಾಗುತ್ತಿದ್ದಾಗ, ಏನಾಯಿತು ಎಂಬುದು ಆ ಪಡೆದವನಿಗೇ ಗೊತ್ತು. ಕೇರಳದ ಕಡೆ ಹೋಗುತ್ತಿದ್ದ ಮೀನಿನ ಲಾರಿಯ ಅಡಿಗೆ ಶರೀಫ್ ಬಿದ್ದಿದ್ದ. ಅವನ ದೇಹದಲ್ಲಿ ಸ್ಪುಟಿಯುತ್ತಿದ್ದ ಬಿಸಿರಕ್ತ ನೇತ್ರಾವತಿ ಹೊಳೆಗೆ ಚೆಲ್ಲಿತ್ತು. ಜನರು ಕಣ್ಮುಚ್ಚಿ ತೆರೆಯುವುದರೊಳಗೆ ಶರೀಫ್‌ನ ಪ್ರಾಣಪಕ್ಷಿ ಹಾರಿಹೋಗಿತ್ತು.

ಎಂಥ ದುರಂತ. ಕೇವಲ ಒಂದೇ ಒಂದು ವರ್ಷಕ್ಕೆ ಮುಂಚೆ ಶರೀಫ್ ಐದಾರು ಲಕ್ಷ ರೂಪಾಯಿ ಸುರಿದು ಮಂಗಳೂರಲ್ಲಿ ಒಂದು ಮೆಡಿಕಲ್ ಶಾಪ್ ತೆರೆದಿದ್ದ. ಅವನ ಲಕ್ ಎಂಬಂತೆ ಭಾರೀ ವ್ಯಾಪಾರವೂ ಆಗುತ್ತಿತ್ತು.

ಹಮಿದಾಕರ ಮೂರು ಗಂಡು ಮಕ್ಕಳಲ್ಲಿ ಶರೀಫ್ ಎರಡನೆಯವ. ಹಿರಿಯ ಮಗ ಮುತ್ತಲಿಬ್ ದೇರಳಕಟ್ಟೆಯಲ್ಲಿ ಜವುಳಿ ಶಾಪ್ ನಡೆಸುತ್ತಿದ್ದ. ಕಿರಿಯ ಮಗ ರಝಾಕ್ ಬಂದರ್‌ನಲ್ಲಿ ಅಡಿಕೆ ವ್ಯಾಪಾರಕ್ಕಿಳಿದಿದ್ದ. ಹಮಿದಾಕರ ಈ ಮೂರು ಗಂಡು ಮಕ್ಕಳ ಬಗ್ಗೆ ಊರಿನ ಎಲ್ಲರೂ ಪ್ರಶಂಸಿಸುವವರೇ. ಯಾರ ತಂಟೆ ತಕರಾರಿಗೆ ಹೋಗದೆ, ತಮ್ಮ ತಮ್ಮ ವೃತ್ತಿಯಲ್ಲೇ ತಲ್ಲೀನರಾಗಿದ್ದ ಇವರು ದೀನೀ ಪ್ರೇಮಿಗಳು. ಕ್ಷಣ ಕ್ಷಣಕ್ಕೂ ಧರ್ಮದ ಚೌಕಟ್ಟಿನೊಳಗೆ ಬದುಕಲು ಹೆಣಗಾಡುವವರು. ಇವರ ಈ ಗುಣ ನಡತೆಯನ್ನು ಸೂಕ್ಷ್ಮವಾಗಿ ಅರಿತಿದ್ದ ಕೆಲವರು ವಿವಾಹ ಸಂಬಂಧ ಕಲ್ಪಿಸಲು ಮುಂದೆ ಬಂದದ್ದೂ ಇದೆ.

ಶರೀಫ್‌ನ ಪರ್ಮನೆಂಟ್ ಗ್ರಾಹಕರಾಗಿದ್ದ ಅರಸ್ತಾನದ ಮಾಮುವಾಕ, ತನ್ನ ಮಗಳು ಝುರೀನಾಳನ್ನು ಶರೀಫ್‌ಗೆ ಕಟ್ಟಿಕೊಡಲು ಮನಸ್ಸು ಮಾಡಿದ್ದರಲ್ಲದೆ, ಹಮಿದಾಕರಲ್ಲಿ ಮಾತನಾಡಿಯೂ ಇದ್ದರು.

'ಇದೆಂಥ ಮಾತು ಮಾಮುವಾಕ, ಅಣ್ಣನನ್ನು ಬಿಟ್ಟು ತಮ್ಮನಿಗೆ ಮದುವೆ ಮಾಡಿದರೆ, ಊರವರು ನನ್ನ ಮುಖಕ್ಕೆ ಉಬ್ಲಕ್ಕೆ ಇಲ್ಲವಾ?' ಎಂದು ಹಮಿದಾಕರ ಮಾತೆತ್ತಿದಾಗ ನಡುವೆ ಬಾಯಿ ಹಾಕಿದ ಮಾಮುವಾಕ, ನಿಮ್ಮ ಮೊದಲ ಮಗನಿಗೆ ಹುಡುಗಿಯ ಚಿಂತೆ ಬೇಡ. ನನ್ನ ತಮ್ಮನ ಮಗಳೊಬ್ಬಳಿದ್ದಾಳೆ. ಶಾಹಿದಾ ಅಂತ ಅವಳ ಹೆಸರು. ನಿಮ್ಮ ಮಗ ಮುತಲೀಬ್‌ಗೆ ಹೇಳಿ ಮಾಡಿಸಿದ ಹೆಣ್ಣು. ಆದರೆ, ಶರೀಫ್‌ನಿಗೆ ನನ್ನ ಮಗಳನ್ನು ಕಟ್ಟಿಕೊಡುವಾಸೆ. ವರದಕ್ಷಿಣೆ ನೀವು ಕೇಳಿದಷ್ಟು ಕೊಡುತ್ತಾನೆ' ಎಂದು ಹೇಳಿ ಹಮಿದಾಕರ ಮುಖವನ್ನೆ ದಿಟ್ಟಿಸಿದ್ದರು.

'ಛೇ, ವರದಕ್ಷಿಣೆಯಾ ಇದೆಂಥ ಮಾತು. ಈ ಮಾತು ನಮ್ಮ ಶರೀಫ್‌ನ ಕಿವಿಗೆ ಹಾಕಬೇಡಿ. ಅವನು ಈ ಸಂಬಂಧಕ್ಕೆ ಖಂಡಿತಾ ಒಪ್ಪಿಗೆ ಕೊಡಲಿಕ್ಕಿಲ್ಲ. ಯಾಕೆಂದರೆ, ಅವನು ವರದಕ್ಷಿಣೆ ಕೊಟ್ಟು ಕೇವಲ ಒಂದೊಂದು ಖರ್ಜೂರ ಮತ್ತು ಶರ್ಬತ್ ಕೊಟ್ಟು ನಮ್ಮ ಮಸೀದಿಯಲ್ಲೇ ಕಾಯಿಂತ್ ಆಗಬೇಕೆಂದು ಸಂಕಲ್ಪ ಮಾಡಿಕೊಂಡವ. ಅಂಥದರಲ್ಲಿ ನೀವು ನನ್ನಲ್ಲಿ ಎಷ್ಟು ಕೊಡಬೇಕು. ಎಂದು ಕೇಳುವುದಾ?ಆದರೆ, ಒಂದು ಮಾತು, ಮೊದಲು ಹೆಣ್ಣು ನಮಗೆ ಒಪ್ಪಿಗೆಯಾಗಬೇಕು. ಮತ್ತೆ ಏನಿದ್ದರೂ ಪಡೆದವ ತೀರ್ಮಾನಿಸಿದಂತೆ ಆಗುತ್ತದೆ' ಎಂದು ಹಮಿದಾಕ ಹೇಳಿದ್ದರು.

- ಹಂಝ ಮಲಾರ್

ವೆಬ್ದುನಿಯಾವನ್ನು ಓದಿ