ಹೆಣ್ಣಿಗೆ ಹೆಣ್ಣೇ ಶತ್ರು!

ಜೀವನ ಪ್ರೇಮಮಯ ಎಂಬ ಕನಸಿಲ್ಲಿ ನಾನು ತೇಲಾಡುತ್ತಿರುವ ಯವ್ವನದಲ್ಲಿ ನನ್ನ ಮನಸ್ಸನ್ನು ರವಿ ಕದ್ದ. ಆದರೆ ತಂದೆ ತಾಯಿಗಳು ವಿರೋಧಿಸಿದರು. ಪರಸ್ಪರ ಬಿಟ್ಟಿರಲಾರದಂತಿದ್ದ ನಮ್ಮ ಮದುವೆ ಹೆತ್ತವರ ವಿರೋಧದ ಮಧ್ಯೆ ನಡೆದುಹೋಯಿತು.

ಬಂಧುಬಳಗದವರ ವಿರೋಧದ ಮಧ್ಯೆ ವಿವಾಹವಾದ ನಂತರ ನಾವು ಇಲ್ಲಿರುವುದು ಕ್ಷೇಮವಲ್ಲ, ಮುಂಬೈಗೆ ತೆರಳಿ ಸುಂದರ ಬದುಕ ಸಾಗಿಸೋಣ ಎಂದು ರವಿ ಹೇಳಿದ. ನಮ್ಮ ಪ್ರಥಮ ರಾತ್ರಿಗಾಗಿ ಮುಂಬೈನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದ. ಸುಂದರವಾಗಿ ಅಲಂಕರಿಸಿಕೊಂಡಿದ್ದ ನಾನು ಕನಸು ಕಾಣುತ್ತಾ ರವಿಯ ಬರುವಿಕೆಯ ನಿರೀಕ್ಷೆಯಲ್ಲಿ ಇದ್ದೆ. ಆ ಸಮಯದಲ್ಲಿ ಬಾಗಿಲು ಬಡಿದ ಶಬ್ದವಾಯಿತು. ರವಿ ಬಂದನೆಂದು ಸಂತಸದಿಂದ ಬಾಗಿಲು ತೆರೆಯುತ್ತಲೆ, ಆಗಂತುಕನೊಬ್ಬ ರೂಂ ಒಳಗೆ ಪ್ರವೇಶಿಸಿದ. ನೀವ್ಯಾರು? ಎಂದು ಕೇಳಿದ ಪ್ರಶ್ನೆಗೆ ರವಿ ನಿಮ್ಮನ್ನು ಹಣಕ್ಕಾಗಿ ಮಾರಿದ್ದಾನೆ ಎಂದು ನುಡಿದ ಆತ ವಿಕಟ ನಗು ನಕ್ಕ.

ಆಗಂತುಕನ ಮಾತುಗಳನ್ನು ಕೇಳಿ ಭೂಮಿ ಬಿರಿದಂತಾಯಿತು. ನಾನು ಪೂರ್ತಿಯಾಗಿ ಮೋಸ ಹೋಗಿದ್ದೇನೆ ಎಂದು ತಿಳಿಯಿತು. ನಾನು ಅಂಥವಳಲ್ಲಾ ಎಂದು ಪರಿಪರಿಯಾಗಿ ಬೇಡಿಕೊಂಡು, ತಂದೆ ತಾಯಿಗಳ ವಿರೋಧದ ಮಧ್ಯೆಯು ರವಿಯನ್ನು ಮದುವೆಯಾದ ವಿಷಯವನ್ನು ಹೇಳಿದೆ. ನನ್ನ ಅದೃಷ್ಟಕ್ಕೆ ಆತ ಒಳ್ಳೆಯ ವ್ಯಕ್ತಿಯಾಗಿದ್ದ. ನೋಡಮ್ಮಾ, ರವಿ ಒಬ್ಬ ಹುಡುಗಿಯರ ಬ್ರೋಕರ್. ಅಮಾಯಕ ಹೆಣ್ಣುಮಕ್ಕಳನ್ನು ಮೋಸಗೊಳಿಸಿ ಇಲ್ಲಿಗೆ ಕರೆತಂದು ಮಾರಾಟ ಮಾಡುತ್ತಾನೆ. ನೀನು ಇಲ್ಲಿಂದ ಓಡಿ ಹೋಗು ಇಲ್ಲವಾದಲ್ಲಿ ನಾಳೆ ವೇಶ್ಯಾವಾಟಿಕೆಗೆ ನಿನ್ನನ್ನು ಖಂಡಿತ ಮಾರುತ್ತಾನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಲು ಸಹಾಯ ಮಾಡಿದ.

ನಾನು ರೈಲ್ವೆ ನಿಲ್ದಾಣಕ್ಕೆ ತಲುಪುತ್ತಲೇ ರೈಲು ಹೊರಡುವ ಸಮಯವಾಗಿದ್ದರಿಂದ ಟಿಕೆಟ್‌ ತೆಗೆದುಕೊಳ್ಳಲು ಆಗಲಿಲ್ಲ ಎಂದು ಪಕ್ಕದಲ್ಲಿರುವ ಮಹಿಳೆಯೊಂದಿಗೆ ರಾಜಿ ಅಳಲು ತೋಡಿಕೊಂಡಳು. ತನ್ನ ಕಾರುಣ್ಯದ ಕತೆಯನ್ನೆಲ್ಲ ಹೇಳಿದಳು.

ನೀನೇನು ಭಯಪಡಬೇಡ ಈ ರೈಲು ಹೈದ್ರಾಬಾದ್‌ಗೆ ಹೋಗುತ್ತದೆ. ಟಿಕೆಟ್‌ ತಪಾಸಣೆಕಾರರಿಗೆ ಹೇಳಿ ನಾನು ಟಿಕೆಟ್ ಕೊಡಿಸುತ್ತೇನೆ. ನಿನ್ನ ಅಡ್ರೆಸ್ ಇದ್ದರೆ ಕೊಡು, ನಾನು ನಿನ್ನ ತಂದೆತಾಯರನ್ನು ಕರೆಸುತ್ತೇನೆ. ಅವರು ಬಂದ ಮೇಲೆ ನೀನು ಹೋಗಬಹುದು. ದುರ್ಘಟನೆ ಸಂಭವಿಸುವ ಮುನ್ನವೇ, ಸದ್ಯ ನೀನು ಪಾರಾಗಿ ಬಂದೆಯಲ್ಲ, ಎಂದು ಅಪರಿಚಿತ ಮಹಿಳೆ ಸರಸ್ವತಿ ಸಾಂತ್ವಾನ ಹೇಳಿ ತನ್ನ ಮನೆಗೆ ಕರೆದೊಯ್ದಳು.

ನೋಡಮ್ಮಾ ರಾಜಿ, ಇದು ನಿಮ್ಮ ಮನೆಯೆಂದು ತಿಳಿದು ನಿಮ್ಮ ತಂದೆ ತಾಯಿ ಬರುವವರೆಗೂ ಆರಾಮವಾಗಿ ನಿಶ್ಚಿಂತೆಯಿಂದ ಇಲ್ಲಿರಬಹುದು ಎಂದು ಸರಸ್ವತಿ ಹೇಳಿದಳು. ಸದ್ಯ ಬದುಕಿಸಿದೆ ದೇವರೆ ಎಂದು ರಾಜಿ ನೆಮ್ಮದಿಯ ಉಸಿರು ಬಿಟ್ಟಳು.

ಅರ್ಧರಾತ್ರಿಯ ನಂತರ ನಿದ್ರೆಯಿಂದ ಎಚ್ಚರವಾದ ರಾಜಿಗೆ ಏನೋ ಗುಸುಗುಸು ಮಾತನಾಡುವ ಶಬ್ದ ಕೇಳಿತು. ಮಾತುಗಳನ್ನು ಕದ್ದು ಕೇಳುವುದು ಸಭ್ಯತೆಯಲ್ಲವೆಂದು ಆಕೆ ಆಲಿಸಲು ಮುಂದಾಗಲಿಲ್ಲ. ಆದರೆ ನೀರವ ರಾತ್ರಿಯಲ್ಲಿ ಬೇಡವೆಂದರೂ ಹೊರಗಿನ ಮಾತುಗಳು ಕಿವಿಗೆ ಬಿತ್ತು.

"ನೋಡು ಇದು ಫ್ರೆಶ್ ಮಾಲು, ಅದೃಷ್ಟಕ್ಕೆ ನನಗೆ ಸಿಕ್ಕಿತು. ಇವಳನ್ನು ಮೊದಲು ನಮ್ಮ ಮಂತ್ರಿಗಳು ಅನುಭವಿಸಲಿ. ನಂತರ ನೀನು ಅನುಭವಿಸಿ ಸುಖಪಡು ಎಂದು ಸರಸ್ವತಿ ಹೇಳುತ್ತಿರುವುದನ್ನು ಕೇಳಿ ರಾಜಿಗೆ ಮೈಯಲ್ಲಾ ಚೇಳು ಕಡಿದಂತಾಯಿತು. ಅಯ್ಯೋ ರಾಕ್ಷಸಿ! ನನ್ನನ್ನು ರಕ್ಷಿಸುತ್ತೇನೆ ಎಂದು ಹೇಳಿದ ನಿನ್ನ ಮಾತನ್ನು ನಂಬಿ ಬಂದರೇ ನೀನೇ ಇಂತಹ ಕೆಲಸ ಮಾಡುವುದೇ ಎಂದು ಮನದಲ್ಲೇ ರಾಜಿ ನೊಂದುಕೊಂಡಳು. ಇಲ್ಲಿಂದ ಪರಾರಿಯಾಗುವ ದಾರಿ ಏನೆಂಬ ಯೋಚನೆಯಲ್ಲಿ ನಿದ್ದೆ ಹತ್ತಲಿಲ್ಲ.

ಆದರೆ ಇತ್ತ ಸರಸ್ವತಿ, ರಾಜಿಯನ್ನು ಮಂತ್ರಿಗೆ ಒಪ್ಪಿಸಿದಲ್ಲಿ ಅವಳ ಸೌಂದರ್ಯ, ತುಂಬಿದ ಯವ್ವನ ಕಂಡು ಆತ ತುಂಬಾ ಹಣಕೊಡುತ್ತಾನೆ ಎಂದು ಕನಸು ಕಾಣುತ್ತಿದ್ದಳು. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಆ ರಾತ್ರಿ ಪೊಲೀಸರು ಸರಸ್ವತಿ ಮನೆ ಮೇಲೆ ದಾಳಿ ಮಾಡಿ ಎಲ್ಲರನ್ನು ಬಂಧಿಸಿದರು.

ಬೆದರಿದ ಹುಲ್ಲೆಯಂತಿದ್ದ ರಾಜಿಯನ್ನು ನೋಡಿ, ನೀನ್ಯಾರಮ್ಮ ಸಭ್ಯಳಂತೆ ಕಾಣುತ್ತಿ, ಇಲ್ಲಿಗೆ ನೀನೇಕೆ ಬಂದೆ? ಈ ಸರಸ್ವತಿ ಮಂತ್ರಿಗಳಿಗೆ ಹೆಣ್ಣುಮಕ್ಕಳನ್ನು ಸರಬರಾಜು ಮಾಡುತ್ತಾಳೆ. ನಿನ್ನ ಅದೃಷ್ಟ ನೆಟ್ಟಗಿತ್ತು, ನಾವು ಬಂದು ದಾಳಿ ಮಾಡಿದ್ದಕ್ಕೆ ನೀನು ಬಚಾವಾದೆ. ನಿನ್ನ ಬಗ್ಗೆ ಮಂತ್ರಿಗಳಿಗೆ ಹೇಳುತ್ತಿರುವಾಗ ಕೇಳಿಸಿಕೊಂಡ ನಾವು ದಾಳಿ ಮಾಡಿದೆವು ಎಂದು ಪೊಲೀಸ್ ಅಧಿಕಾರಿ ಹೇಳಿದರು. ನಿನ್ನ ಬಗ್ಗೆ ಹೇಳು ಎಂದು ಪೊಲೀಸಧಿಕಾರಿ ಕೇಳಿದಾಗ ರಾಜಿ ನಡೆದ ಕಥೆಯನ್ನೆಲ್ಲಾ ಹೇಳಿದಳು. ಚಿಂತೆ ಬೇಡ ನಿಮ್ಮ ತಂದೆ ತಾಯಿಗಳ ಮನೆಗೆ ನಿನ್ನನ್ನು ಸೇರಿಸುತ್ತೇನೆ ಎಂದು ಹೇಳಿದ ಪೊಲೀಸರು ಸರಸ್ವತಿಯನ್ನು ಬಂಧಿಸಿ ಕರೆದೊಯ್ದರು.

ಅಯ್ಯೋ ರಾಮ ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳಿ ನಿಟ್ಟಿಸಿರುಬಿಟ್ಟಳು ರಾಜಿ.

ವೆಬ್ದುನಿಯಾವನ್ನು ಓದಿ