ಶಿಕ್ಷಣದ ವ್ಯಾಪಾರೀಕರಣ ತಾಳಿಕೊಂಡೀತೇ ಕನ್ನಡ?

ದೀಪಕ್ ಮಧ್ಯಸ್ಥ
ಬೆನ್ನಿನಲ್ಲಿ ಇಡೀ ಭೂಮಿಯ ಭಾರ ಹೊತ್ತವನಂತೆ, ಶಾಲೆ ಚೀಲವನ್ನು ಹೊತ್ತುಕೊಂಡು, ಕುತ್ತಿಗೆಗೆ ಕುತ್ತಿಗೆ ಪಟ್ಟಿ ಎಂಬ ನೇಣು 'ಬಿಗಿದು'ಕೊಂಡು, ಮನೆಗೆಲಸ (ಹೋಮ್ ವರ್ಕ್) ಮಾಡುವುದಕ್ಕಾಗಿ ದೇವರು ಕೊಟ್ಟ ಎರಡು ಕಣ್ಣು ಸಾಲದೆ ಮತ್ತೆರಡು ಕಣ್ಣುಗಳನ್ನು ಹಾಕಿಕೊಂಡು, ಮನೆಗೆಲಸದ ಭೂತ ಆವರಿಸಿದವರಂತೆ ಆಂಗ್ಲ ಮಾಧ್ಯಮ ಶಾಲಾ ತರಗತಿಗಳಿಂದ ಹೊರಗೋಡಿ ಬರುತ್ತಿರುವ ಹುಡುಗರನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

ಪೋಷಕರ ಒಣ ಪ್ರತಿಷ್ಠೆ ಕಾಯ್ದುಕೊಳ್ಳಲು ಈ ಮಕ್ಕಳಿಗೆ ಅನಿಯಮಿತ ಅವಧಿಯ ಕಠಿಣ ಸಜೆ. ಇನ್ನು ಆ ಶಾಲೆಗಳ ಆಡಳಿತ ಮಂಡಳಿಯೋ, ಅವುಗಳದ್ದು ಇನ್ನೊಂದು ರಾಗ. ಮನೆಗೆಲಸದ ಪ್ರಮಾಣವನ್ನೇ ತಮ್ಮ ತಮ್ಮ ಪ್ರತಿಷ್ಠೆಯ ಮೌಲ್ಯ ಎಂದು ತಿಳಿದುಕೊಂಡು, ಎಷ್ಟು ಸಾಧ್ಯವೋ ಅಷ್ಟು ಮನೆಗೆಲಸ ನೀಡಲು ಶಿಕ್ಷಕರಿಗೆ ವಿಶೇಷ ಆದೇಶ ಹೊರಡಿಸುವ ಕೆಲವು ಶಾಲೆಗಳೂ ಇವೆ. ಈಗಲೂ ಜನರ ತಲೆಯಲ್ಲಿ ಇರುವ ಒಂದು ಮೌಢ್ಯ ಭಾವನೆ ಎಂದರೆ ಆಂಗ್ಲ ಭಾಷೆ ಗೊತ್ತಿರುವವನಿಗೆ ಮಾತ್ರ ಕೆಲಸ, ಇಲ್ಲದಿದ್ದರೆ ಕೆಲಸವಿಲ್ಲ ಎನ್ನುವುದು. ಅದಕ್ಕೆ ಪೂರಕವಾಗಿ ನಾಯಿಕೊಡೆಗಳಂತೆ ಆಂಗ್ಲ ಮಾಧ್ಯಮ ಶಾಲೆಗಳು ಹುಟ್ಟುಕೊಂಡವು. ಶಿಕ್ಷಣವಂತೂ ವ್ಯಾಪಾರದ ವಸ್ತುವೇ ಆಗಿಹೋಯಿತು. ತಾನಾಗಿಯೇ ಆಂಗ್ಲ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂತು. ಅದಕ್ಕೇ ಜನ ಮುಗಿಬೀಳತೊಡಗಿದರು. ಮಕ್ಕಳ ಬಾಲ್ಯ ಬರೇ ಮನೆಕೆಲಸ ಒಪ್ಪಿಸುವುದರಲ್ಲೇ ಕಳೆದುಹೋಯಿತು. ರಜಾ ದಿನವೂ ಒಂದಲ್ಲ ಒಂದು ಟ್ಯೂಷನ್...

ಪರಿಣಾಮ ? ಕನ್ನಡ ಮಾಧ್ಯಮದ ವಿದ್ಯಾರ್ಥಿ ಎಂದರೆ ಅಸಡ್ಡೆಯ ಭಾವನೆ. ಕನ್ನಡ ಮಾಧ್ಯಮದಲ್ಲಿ ಹೇಳಿಕೊಳ್ಳುವಷ್ಟು ಹೋಮ್ ವರ್ಕ್ ಕೂಡ ಕೊಡುವುದಿಲ್ಲ ಎಂಬ ಆರೋಪ. ಬೆಳಗಾತ ಎದ್ದು ಟ್ಯೂಷನ್, ಶಾಲೆಯಿಂದ ಬಂದ ತಕ್ಷಣ ಕೋಚಿಂಗ್ ಎಂಬ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಕಾಲನಿಯಾಮಕ ಪಟ್ಟಿಯ ಅರಿವೂ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಒಂಥರಾ ಕೀಳರಿಮೆ. ಇಂಥ ಕೀಳರಿಮೆ ಬೇಕಿಲ್ಲ. ಕನ್ನಡ ಮಾಧ್ಯಮದಲ್ಲೇ ಓದಿ ವಿಶ್ವವಿಖ್ಯಾತಿ ಪಡೆದವರಿಲ್ಲವೇ ನಮ್ಮ ಕಣ್ಣಮುಂದೆ? ಅದನ್ನೊಂದು ಬಾರಿ ಜ್ಞಾಪಿಸಿಕೊಂಡರೆ ಆತ್ಮವಿಶ್ವಾಸ ತಾನಾಗಿಯೇ ವೃದ್ಧಿಯಾಗಬಹುದು.

ಆಗಿ ಹೋದ ವಿಷಯದ ಬಗ್ಗೆ ಚಿಂತಿಸಿ ಫಲವಿಲ್ಲ. ನಮ್ಮ ಮುಂದಿರುವ ಮಾರ್ಗವೆಂದರೆ ಪರಿಹಾರಗಳನ್ನು ಕಂಡುಹುಡುಕುವುದು.

ನನಗನಿಸಿದ ಒಂದೆರಡು ಸಲಹೆಗಳನ್ನು ಇಲ್ಲಿ ಸೂಚಿಸುತ್ತೇನೆ. ಮೊದಲನೆದಾಗಿ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಹತ್ತನೇ ತರಗತಿಯ ತನಕ ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವುದು. ಹಾಗೆಂದು ಆಂಗ್ಲ ಭಾಷೆಯನ್ನು ಕಡೆಗಣಿಸುವುದಲ್ಲ. ಕನ್ನಡದ ಒಂದು ಪಾಠವಿದ್ದರೆ ಅದರ ಆಂಗ್ಲ ಭಾಷಾ ಅನುವಾದ ಇನ್ನೊಂದು ಪಾಠವಾಗಿರಬೇಕು. ಅದೂ ಕೆಲವು ಪಾಠಗಳನ್ನು ಮಾತ್ರ. ಅಂದರೆ ನಾಟಕ, ಕಥೆಗಳು ಅಷ್ಟೇ.

ಆಂಗ್ಲ ಭಾಷೆಯ ಸಂವಹನಕ್ಕೆ ಹೆಚ್ಚು ಮಹತ್ವಕೊಡಬೇಕೇ ಹೊರತು ಆಂಗ್ಲ ಭಾಷಾ ಸಾಹಿತ್ಯಕ್ಕಲ್ಲ. ಹೀಗೆ ಮಾಡುವುದರಿಂದ ಎರಡೂ ಭಾಷೆಗಳು ಮಗುವಿನ ತಲೆಯಲ್ಲಿ ಚೆನ್ನಾಗಿಯೇ ಹೊಕ್ಕುತ್ತವೆ. ನಮ್ಮ ಕನ್ನಡದ ಅಸ್ತಿತ್ವ ಕೂಡ ಕೊನೆ ತನಕ ಉಳಿಯುವುದು. ಮಗದೊಂದು ಸಲಹೆಯೆಂದರೆ, ಕನ್ನಡದ ವೃತ್ತಪತ್ರಿಕೆಗಳು ಶಾಲಾ ವಿದ್ಯಾರ್ಥಿಗಳಿಗೆ ಕೇರಳದ ಕೆಲವು ವೃತ್ತಪತ್ರಿಕೆಗಳಂತೆ ಉಚಿತ ವಿತರಣೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳ ಕನ್ನಡ ಭಾಷಾ ಹಿಡಿತದೊಂದಿಗೆ ಸಾಮಾನ್ಯ ಜ್ಞಾನವೂ ಹೆಚ್ಚಾಗುತ್ತದೆ.

ಪರಿಹಾರಗಳು ನೂರಾರಿವೆ. ಕಂಡುಹುಡುಕಿ ಅದನ್ನು ಅಳವಡಿಸುವ ಮನಸ್ಸು ಬೇಕಷ್ಟೆ. ಕನ್ನಡ ಅಭಿವೃದ್ಧಿಗೆ, ವಿದ್ಯಾರ್ಥಿ ಜೀವನದಲ್ಲೇ ಕನ್ನಡದ ಮೇಲೆ ಅಭಿಮಾನ ಮೂಡಿಸಲು ಮತ್ತು ಕನ್ನಡ ಪ್ರಜ್ಞೆ ಹೆಚ್ಚಿಸಲು ಈ ಮೇಲಿನ ಸಲಹೆಗಳು ಪೂರಕ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?

ವೆಬ್ದುನಿಯಾವನ್ನು ಓದಿ