ಶಾಸ್ತ್ರೀಯ ಸ್ಥಾನ 'ಮಾನ' ಕಾಪಾಡಲಿ...

ನಾಗೇಂದ್ರ ತ್ರಾಸಿ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ದಶಕಗಳ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿಯುವ ಮೂಲಕ 53ನೇ ಕನ್ನಡ ರಾಜ್ಯೋತ್ಸವಕ್ಕೆ ಬಂಪರ್ ಕೊಡುಗೆ ಎಂಬಂತೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುವ ಮೂಲಕ ಶಾಸ್ತ್ರೀಯ ಭಾಷೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲು ನಿರ್ಧರಿಸಿತ್ತು. ಈ ಎಲ್ಲಾ ರಾಜಕೀಯ ತಿಕ್ಕಾಟಗಳ ನಡುವೆಯೇ ಶುಕ್ರವಾರ ದಿಢೀರನೆ ಕೇಂದ್ರದ ಯುಪಿಎ ಸರ್ಕಾರ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನವನ್ನು ಘೋಷಿಸಿದೆ.
ND

ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಬೆರೆಸುವುದೇ ನಮ್ಮ ರಾಜಕೀಯ ಪಕ್ಷಗಳ ಜಾಯಮಾನ ಎಂಬಂತಾಗಿ ಬಿಟ್ಟಿದೆ. ಕಳೆದ ಒಂದು ದಶಕಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿ ನೆರೆಯ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರೂ ಕೂಡ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡದಿರಲು ಅಡ್ಡಗಾಲು ಹಾಕಿದ್ದರು.

ತಮಿಳು ಪುರಾತನ ಭಾಷೆ ಎಂಬ ಕುರುಡು ವ್ಯಾಮೋಹ ಒಂದೆಡೆಯಾಗಿದ್ದರೆ, ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಮೈತ್ರಿಕೂಟದ ಡಿಎಂಕೆಯ ಮಾತನ್ನೂ ತೆಗೆದುಹಾಕುವಂತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಬಳಿಕ ಕರುಣಾನಿಧಿಯವರ ವಿರುದ್ಧ ಬಹಳಷ್ಟು ವಿರೋಧ ವ್ಯಕ್ತವಾದಾಗ, ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಲ್ಲಿ ತಮಿಳುನಾಡು ಅಡ್ಡಗಾಲು ಹಾಕುತ್ತಿಲ್ಲ ಎಂಬುದಾಗಿ ಸ್ಪಷ್ಟನೆ ಕೂಡ ನೀಡಿದ್ದರು. ಈ ಬೆಳವಣಿಗೆ ನಡೆಯುತ್ತಿರುವಂತೆಯೇ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ದೆಹಲಿಗೆ ಸರ್ವಪಕ್ಷ ನಿಯೋಗ ಒಯ್ಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಖ್ಯಾತೆ ತೆಗೆದಿದ್ದವು.

ನಿಯೋಗ ಕರೆದೊಯ್ಯುವ ಯಡಿಯೂರಪ್ಪನವರ ಹೇಳಿಕೆ ಹಾಗೂ ಶಾಸ್ತ್ರೀಯ ಸ್ಥಾನದ ದಿಢೀರ್ ಘೋಷಣೆಯಲ್ಲಿ ರಾಜಕೀಯ ಇಲ್ಲದಿಲ್ಲ ಎಂಬ ಮಾತನ್ನು ಸಾರಾಸಗಟಾಗಿ ತೆಗೆದುಹಾಕುವಂತಿಲ್ಲ, ಯಾಕೆಂದರೆ ಬಿಜೆಪಿ ನೇತೃತ್ವದಲ್ಲಿ ನಿಯೋಗ ತೆರಳಿ ಧರಣಿ ನಡೆಸಿದ ಬಳಿಕ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ಘೋಷಿಸಿದರೆ ಅದರ ಕ್ರೆಡಿಟ್ ಎಲ್ಲಾ ಬಿಜೆಪಿ ಪಾಲಾದರೆ ಕಷ್ಟ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಆಡಳಿತ ಗದ್ದುಗೆಯನ್ನು ಯಾರು ಏರುತ್ತಾರೋ ಬಲ್ಲವರಾರು ಎಂಬಂತಹ ಲೆಕ್ಕಚಾರದಲ್ಲಿ ತೊಡಗಿದ ಯುಪಿಎ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಅಸ್ತು ಎಂದಿದೆ.

ನೆರೆಯ ಆಂಧ್ರ ಕೂಡ ಕಾಂಗ್ರೆಸ್ ಸರ್ಕಾರ ಹೊಂದಿದೆ, ಹಾಗಾಗಿ ಯುಪಿಎ ಸರ್ಕಾರ ತರಾತುರಿಯಲ್ಲಿ ತುಂಬಾ ಚಾಣಾಕ್ಷ ನಿರ್ಧಾರ ಕೈಗೊಂಡಿದೆ. ಏನೇ ಆಗಲಿ ಶಾಸ್ತ್ರೀಯ ಸ್ಥಾನಮಾನ ದೊರೆಯುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಾಕಷ್ಟು ಹಾವು-ಏಣಿ ಆಟ ಆಡಿದ್ದರೂ ಕೂಡ ಇನ್ನು ಮುಂದಾದರೂ ಕನ್ನಡದ ಏಳಿಗೆಗೆ ಒಗ್ಗಟ್ಟಾಗಿ ಹೋರಾಡಬೇಕಾಗಿದೆ.

ಯಾಕೆಂದರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಕೂಡಲೇ ಎಲ್ಲವೂ ಮುಗಿಯಲಿಲ್ಲ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದ ಕೇಂದ್ರದ ಯುಪಿಎ ನಿಜಕ್ಕೂ ಶ್ಲಾಘನೆಗೆ ಒಳಗಾಗಿದೆ. ಇದೀಗ ಕನ್ನಡ ಸಂಶೋಧನೆಗೆ ವಿಪುಲ ಅವಕಾಶ ದೊರೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಒಂದು ಸ್ಥಾನ ಸಿಕ್ಕಂತಾಗಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯುವ ಜೊತೆಗೆ ಕೇಂದ್ರೀಯ ಕೈಗಾರಿಕೆಗಳಾದ ಬಿಇಎಲ್, ಹೆಚ್‌ಎಂಟಿ, ಐಟಿಐ, ಹೆಚ್‌ಇಎಲ್ ಸೇರಿದಂತೆ ಖಾಸಗಿ ಕಂಪೆನಿ ಮತ್ತು ಸರ್ಕಾರಿ ವಲಯಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಅವಕಾಶ ದೊರೆಯಬೇಕಾಗಿದೆ. ಸರೋಜಿನಿ ಮಹಿಷಿ, ನಂಜುಂಡಪ್ಪ ವರದಿ ಜಾರಿ, ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮತ್ವ ಪಡೆಯುವ ನಿಟ್ಟಿನಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳು ತಿಕ್ಕಾಟಗಳನ್ನು ಬದಿಗಿಟ್ಟು, ಒಗ್ಗಟ್ಟಿನ ಹೋರಾಟವನ್ನು ಮಾಡುವ ಮೂಲಕ ಕನ್ನಡದ ಏಳಿಗೆಗೆ ಕಂಕಣಬದ್ಧರಾಗಬೇಕು. ಹಾಗೆಯೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಕೂಡಲೇ ಕನ್ನಡ ಭಾಷೆ ಉನ್ನತಿ ಸಾಧಿಸಲಾರದು ಇದರಲ್ಲಿ ಪ್ರತಿಯೊಬ್ಬ ಕನ್ನಡಿಗರು ಭಾಷೆಯನ್ನು ಉಳಿಸಿ-ಬೆಳೆಸುವ ಹೊಣೆ ಹೊರಬೇಕಾಗಿದೆ....