ಕಲ್ಪವೃಕ್ಷವಾಹನೋತ್ಸವದ ವಿಜೃಂಭಣೆ

WD
ತಿರುಪತಿ ತಿರುಮಲ ಬೆಟ್ಟದೊಡೆಯ ಶ್ರೀ ವೆಂಕಟೇಶ್ವರನಿಗೆ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಬೆಳಿಗ್ಗೆ ದೇವರ ಮೂರ್ತಿಗಳನ್ನು ಕಲ್ಪವೃಕ್ಷ ವಾಹನದಲ್ಲಿ ಕುಳ್ಳಿರಿಸಿ ವೈಭವದ ಮೆರವಣಿಗೆ ನಡೆಯಿತು.

ಬೆಳಿಗ್ಗೆ 9.00 ಗಂಟೆಯಿಂದ ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಗೋವಿಂದ ನಾಮಸ್ಮರಣೆಯೊಂದಿಗೆ ಪಾಲ್ಗೊಂಡರು.

ಸಂಜೆ ಉಯ್ಯಾಲೆ ಸೇವೆ ನಡೆದು ಸರ್ವಭೂಪಾಲ ವಾಹನದಲ್ಲಿ ವಿಗ್ರಹದ ಮೆರವಣಿಗೆ ನೋಡಲು ಭಕ್ತರು ಕಾತುರತೆಯಿಂದ ನೆರೆದಿದ್ದಾರೆ.

ಪಾಲನಕರ್ತೃವಾದ ಮಹಾವಿಷ್ಣುವಿಗೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ಭೂಮಿಯ ಎಲ್ಲಾ ರಾಜರು (ಭೂಪಾಲರು) ವಾಹನದ ರೂಪ ತಾಳುತ್ತಾರೆ ಎಂಬ ಪ್ರತೀತಿ ಇದೆ. ಉತ್ಸವದ ಬಳಿಕ ಸರ್ವದರ್ಶನ ಸೇವೆ ನಡೆಯಲಿದೆ.

ನಾಳೆ, ಬುಧವಾರ, ಬೆಳಿಗ್ಗೆ ಮೋಹಿನಿ ಅವತಾರೋತ್ಸವ ಹಾಗೂ ಸಂಜೆ ವಿಶ್ವವಿಖ್ಯಾತ ಗರುಡವಾಹನ ಉತ್ಸವವು ವಿಜೃಂಭಣೆಯಿಂದ ಜರುಗಲಿದೆ.

ಶ್ರೀವೆಂಕಟೇಶ್ವರನು ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ದಿನದಂದು ಪಕ್ಷಿರಾಜ ಗರುಡನನ್ನು ತನ್ನ ವಾಹನವಾಗಿ ಆರಿಸಿಕೊಳ್ಳುತ್ತಾನೆ. ಎಲ್ಲಾ ವಾಹನ ಉತ್ಸವಗಳಲ್ಲಿ ಗರುಡ ವಾಹನೋತ್ಸವವು ಅತ್ಯಂತ ಜನಾಕರ್ಷಣೀಯವಾದುದು ಮತ್ತು ಮಹತ್ತರವೂ ಆದುದು. ಈ ದಿನ ಭಕ್ತಾದಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ.

ವೆಬ್ದುನಿಯಾವನ್ನು ಓದಿ